ಥಾಣೆ(ಮಹಾರಾಷ್ಟ್ರ):ರಸ್ತೆ ಉಲ್ಲಂಘನೆ ಮಾಡಿರುವ ಜೋಡಿ ಹಕ್ಕಿಗಳನ್ನು ಪ್ರಶ್ನೆ ಮಾಡಿರುವ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ನಿಂದಿಸಿ, ಬೆದರಿಕೆ ಹಾಕಿರುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದೆ. ಥಾಣೆಯ ಮೀರಾ-ಭಾಯಂದರ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಸ್ತೆ ನಿಯಮ ಉಲ್ಲಂಘನೆ ಮಾಡಿದ್ದ ಆರೋಪದ ಮೇಲೆ ಟ್ರಾಫಿಕ್ ಪೊಲೀಸ್ ಕಾರು ಸೀಜ್ ಮಾಡಿದ್ದಾರೆ. ಈ ವೇಳೆ ಆಕ್ರೋಶಗೊಂಡ ಅಮರ್ ಸಿಂಗ್ ಹಾಗೂ ಆತನ ಪತ್ನಿ ಮೀನಾ ಸಿಂಗ್ ಟ್ರಾಫಿಕ್ ಪೊಲೀಸ್ಗೆ ನಿಂದಿಸಿ, ಬೆದರಿಕೆ ಹಾಕಿದ್ದಾರೆ. ಇದು ನಿಮ್ಮ ತಂದೆಯ ರಸ್ತೆನಾ? ಸಮವಸ್ತ್ರ ಹಾಕಿಕೊಂಡಿದ್ದಕ್ಕೆ ಇಂತಹ ಅಹಂಕಾರ ಬೇಡ, ಹಾಕಿಕೊಂಡಿರುವ ಸಮವಸ್ತ್ರ ತೆಗೆದುಹಾಕಿ ಜಗಳಕ್ಕೆ ಬನ್ನಿ, ಕೇವಲ 5 ನಿಮಿಷದಲ್ಲಿ ನಿಮ್ಮನ್ನು ಸೋಲಿಸುತ್ತೇನೆ ಎಂದು ಅಮರ್ ವಾರ್ನ್ ಮಾಡಿದ್ದಾನೆ. ಈ ವೇಳೆ ಮೀನಾ ಕೂಡ ಕೆಟ್ಟದಾಗಿ ವರ್ತಿಸಿದ್ದಾಳೆ.