ಆಲಪ್ಪುಳ (ಕೇರಳ):ಕೇರಳದಲ್ಲಿ ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಎಸ್ಡಿಪಿಐ ಮತ್ತು ಬಿಜೆಪಿ ನಾಯಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಎಡಿಜಿಪಿ ವಿಜಯ್ ಸಾಖರೆ, ಎಸ್ಡಿಪಿಐ ಮುಖಂಡ ಶಾನ್ ಅವರ ಹತ್ಯೆಗೆ ಸಂಬಂಧಿಸಿದಂತೆ ಪ್ರಸಾದ್ ಮತ್ತು ರತೀಶ್ ಎಂಬ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅದರಲ್ಲಿ ಒಬ್ಬ ಹತ್ಯೆಯ ಸಂಚಿನ ರೂವಾರಿಯಾಗಿದ್ದಾನೆ. ಅಲ್ಲದೇ, ಈ ಸಂಚಿನಲ್ಲಿ 10 ಜನರು ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ಇಬ್ಬರು ಪ್ರಮುಖ ಆರೋಪಿಗಳ ಬಂಧನದಿಂದ ಹತ್ಯೆ ಕೇಸ್ಗೆ ಬಲ ಬಂದಿದೆ. ತಲೆಮರೆಸಿಕೊಂಡಿರುವ ಇನ್ನು 8 ಜನರನ್ನು ಶೀಘ್ರವೇ ಬಂಧಿಸಲಾಗುವುದು. ಬಂಧಿತ ಪ್ರಮುಖ ಆರೋಪಿ ಎಸ್ಡಿಪಿಐ ಮುಖಂಡನ ಕೊಲೆಗೆ ವಾಹನ ತಯಾರಿ, ಗುಂಪು ಮತ್ತು ಯೋಜನೆ ರೂಪಿಸಿದ್ದ ಬಗ್ಗೆ ತಿಳಿದು ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.