ಬಕ್ಸರ್(ಬಿಹಾರ):ಕಳ್ಳತನ ಮಾಡ್ತಿದ್ದ ವೇಳೆ ರೆಡ್ಹ್ಯಾಂಡ್ ಆಗಿ ಕಳ್ಳನನ್ನು ಹಿಡಿದಿರುವ ಎರಡೂವರೆ ಅಡಿಯ ದಂಪತಿ ಸಾಹಸಮೆರೆದಿದ್ದು, ಆತನನ್ನ ಪೊಲೀಸರಿಗೊಪ್ಪಿಸಿದ್ದಾರೆ. ಈ ಜೋಡಿಯ ಕೆಲಸಕ್ಕೆ ಇದೀಗ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗ್ತಿದೆ. ಬಿಹಾರದ ಬಕ್ಸರ್ ಕೃಷ್ಣಬ್ರಹ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡೂವರೆ ಅಡಿ ಎತ್ತರದ ದಂಪತಿ ಸೇರಿ ಐದು ಅಡಿ ಎತ್ತರದ ಕಳ್ಳನನ್ನು ಹಿಡಿದಿದ್ದು, ತದನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಯನ್ನ ಜೈಲಿಗೆ ಅಟ್ಟಿದ್ದಾರೆ.
ಮನೆಗೆ ನುಗ್ಗಿದ ಕಳ್ಳನನ್ನ ಹಿಡಿದ ಪೊಲೀಸರಿಗೊಪ್ಪಿಸಿದ ಕುಬ್ಜ ದಂಪತಿ ಇದನ್ನೂ ಓದಿರಿ: ಒಂಟಿ ತಾಯಿಯ ಮಗಳೆಂದು ಶಾಲೆಗೆ ಸೇರಿಸಿಕೊಳ್ಳಲು ನಿರಾಕರಿಸಿದ ಶಾಲೆ: ಮಹಿಳೆಯ ಗಂಭೀರ ಆರೋಪ
ಲಭ್ಯವಾಗಿರುವ ಮಾಹಿತಿ ಪ್ರಕಾರ ಕೃಷ್ಣಬ್ರಹ್ಮ ಪೊಲೀಸ್ ಠಾಣಾ ವ್ಯಾಪ್ತಿಯ ನುವಾನ್ ಗ್ರಾಮದ ನಿವಾಸಿ ರಂಜಿತ್ ಮತ್ತು ಆತನ ಪತ್ನಿ ಮನೆಯಲ್ಲಿ ಮಲಗಿದ್ದರು. ಭಾನುವಾರ ರಾತ್ರಿ ಅವರ ಮನೆಗೆ ಕಳ್ಳನೊಬ್ಬ ನುಗ್ಗಿದ್ದಾನೆ. ಬೀರು ತೆರೆದು ಕಳ್ಳತನ ಮಾಡಲು ಮುಂದಾಗಿದ್ದಾನೆ. ಈ ವೇಳೆ ಎಚ್ಚರಗೊಂಡಿರುವ ರಂಜಿತ್ ಓಡಿಹೋಗಿ ಆತನನ್ನ ಹಿಂಬದಿಯಿಂದ ಹಿಡಿದಿದ್ದಾನೆ. ಇದರ ಬೆನ್ನಲ್ಲೇ ಅಲ್ಲಿಗೆ ತೆರಳಿರುವ ಪತ್ನಿ ಗಂಡನಿಗೆ ಸಹಾಯ ಮಾಡಿದ್ದಾಳೆ. ಜೊತೆಗೆ ಕಿರುಚಾಡಿ, ಸ್ಥಳೀಯರನ್ನ ಸೇರಿಸಿದ್ದಾರೆ.
ಇದರ ಬೆನ್ನಲ್ಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಅಲ್ಲಿಗೆ ಬಂದಿರುವ ಪೊಲೀಸರು ಕಳ್ಳನನ್ನ ಬಂಧನ ಮಾಡಿದ್ದಾರೆ. ಬಂಧಿತ ಆರೋಪಿಯನ್ನ ಧೋಂಧ ಬಿಂದ್ ಎಂದು ಗುರುತಿಸಲಾಗಿದ್ದು, ಆತನ ಸಹಚರರಿಗೋಸ್ಕರ ಶೋಧಕಾರ್ಯ ಆರಂಭಗೊಂಡಿದೆ ಎಂದು ಎಸ್ಐ ಸಂತೋಷ್ ಕುಮಾರ್ ತಿಳಿಸಿದ್ದಾರೆ.