ಶಾಮ್ಲಿ(ಉತ್ತರಪ್ರದೇಶ):ತಾನು ಮದುವೆಯಾಗಲು ಹೆಣ್ಣು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಲ್ಲದೇ, ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್, ಪತ್ನಿ ಡಿಂಪಲ್ ಯಾದವ್ ಸೇರಿದಂತೆ ಹಲವರಿಗೆ ಮನವಿ ಮಾಡಿದ್ದ ಕುಬ್ಜ ವ್ಯಕ್ತಿ ಅಜೀಂ ಮನ್ಸೂರಿ ಅವರ ಆಸೆ ಕೊನೆಗೂ ಈಡೇರುವ ಕಾಲ ಬಂದಿದೆ.
ಹೌದು, 2019 ರಿಂದ ತನ್ನವಳಿಗಾಗಿ ಹುಡುಕಾಟ ನಡೆಸುತ್ತಿದ್ದ ಎರಡೂವರೆ ಅಡಿ(30 ಇಂಚು) ಎತ್ತರವಿರುವ ಕುಬ್ಜ ವ್ಯಕ್ತಿ ಅಜೀಂ ಮನ್ಸೂರಿಗೆ ವಧು ಸಿಕ್ಕಿದ್ದಾಳೆ. ನವೆಂಬರ್ 7 ರಂದು ಮನ್ಸೂರ್ ವಿವಾಹ ಬಂಧನಕ್ಕೆ ಒಳಗಾಗಲಿದ್ದಾನೆ. ಮದುವೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಸೇರಿ ಹಲವರನ್ನು ಆಹ್ವಾನಿಸಲು ಓಡಾಡುತ್ತಿದ್ದಾರೆ.
ಯಾರೀ ಅಜೀಂ ಮನ್ಸೂರಿ:ಉತ್ತರಪ್ರದೇಶದ ಶಾಮ್ಲಿಯ ನಿವಾಸಿಯಾಗಿರುವ ಅಜೀಂ ಮನ್ಸೂರಿ ಸಮಾಜವಾದಿ ಪಕ್ಷದ ಹಳೆಯ ಕಾರ್ಯಕರ್ತರಾಗಿದ್ದಾರೆ. ಚುನಾವಣೆಯ ವೇಳೆ ಅಖಿಲೇಶ್ ಯಾದವ್ ಶಾಮ್ಲಿಗೆ ಪ್ರಚಾರಕ್ಕೆ ಬಂದಾಗ ತನಗೆ ವಧು ಹುಡುಕಿಕೊಡಿ ಎಂದು ಭಿನ್ನಹ ಸಲ್ಲಿಸಿದ್ದರು. ಆಗ ಇದು ದೊಡ್ಡ ಸುದ್ದಿಯಾಗಿತ್ತು. ಬಳಿಕ ಪೊಲೀಸ್ ಠಾಣೆಗೆ ದೂರು ಕೂಡ ನೀಡಿದ್ದ.
ಎರಡೂವರೆ ಅಡಿಯ ಮನ್ಸೂರ್:ಮನ್ಸೂರ್ ಕುಬ್ಜವಾಗಿರುವ ಕಾರಣ ಯಾರೂ ಕೂಡ ಹೆಣ್ಣು ಕೊಡಲು ಮುಂದಾಗಿರಲಿಲ್ಲ. ಇದರಿಂದ ಬೇಸತ್ತಿದ್ದ ಅಜೀಂ ರಾಜಕಾರಣಿಗಳು, ಪೊಲೀಸರ ಮೊರೆ ಹೋಗಿದ್ದ. ಅಖಿಲೇಶ್ ಯಾದವ್ ಅವರ ಪತ್ನಿಯಾದ ಡಿಂಪಲ್ ಯಾದವ್ ಅವರನ್ನು ಅತ್ತಿಗೆ ಎಂದು ಸಂಬೋಧಿಸುವ ಮನ್ಸೂರ್ ವಧು ಹುಡುಕಲು ಅವರಿಗೂ ಹೇಳಿದ್ದರು.
ಕೂಡಿ ಬಂದ ಕಂಕಣಭಾಗ್ಯ:2019 ರಿಂದ ವಧು ಅನ್ವೇಷಣೆಯಲ್ಲಿದ್ದ ಅಜೀಂಗೆ ಈಗ ಕಂಕಣಭಾಗ್ಯ ಕೂಡಿ ಬಂದಿದೆ. ತನ್ನಷ್ಟೇ ಎತ್ತರವಿರುವ ಯುವತಿಯೊಬ್ಬಳು ಅಜೀಂ ವರಿಸಲು ಸಜ್ಜಾಗಿದ್ದಾಳೆ. ಮುಂದಿನ ತಿಂಗಳ 7 ರಂದು ವಿವಾಹ ನಿಶ್ಚಯ ಮಾಡಲಾಗಿದೆ. ಇದರ ಸಿದ್ಧತೆಯಲ್ಲಿರುವ ಈತ ಶೇರ್ವಾನಿ, ಕುರ್ತಾ ಸೇರಿದಂತೆ 5 ಹೊಸ ಬಟ್ಟೆಗಳನ್ನು ಹೊಲಿಸಿಕೊಂಡಿದ್ದಾನೆ.
ರಾಜಕಾರಣಿಗಳಿಗೆ ಆಹ್ವಾನ:ಅಜೀಂ ಮನ್ಸೂರ್ ಕುಬ್ಜವಾಗಿದ್ದರೂ ಆಸೆ ಆಕಾಶದಷ್ಟಿದೆ. ತನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಯೋಗಿ ಆದಿತ್ಯನಾಥ್, ಮಾಜಿ ಸಿಎಂ ಅಖಿಲೇಶ್ ಯಾದವ್, ಡಿಂಪಲ್ ಯಾದವ್ ಸೇರಿದಂತೆ ಹಲವರು ಬರಬೇಕು ಎಂಬ ಆಸೆ ಹೊತ್ತಿದ್ದಾನೆ. ಅವರನ್ನು ಕಲ್ಯಾಣಕ್ಕೆ ಆಹ್ವಾನಿಸಲೂ ತಯಾರಿ ನಡೆಸಿದ್ದಾನೆ.
ಓದಿ:ದೊಂಡರಾಯದಲ್ಲಿ ಹಿಂದೂ ಮುಸ್ಲಿಮರ ಅದ್ಧೂರಿ ದೀಪಾವಳಿ.. ಎಲ್ಲೆಡೆ ಪ್ರಶಂಸೆ