ಶಾಮ್ಲಿ (ಉತ್ತರ ಪ್ರದೇಶ): ಮಧು ಹುಡುಕಾಟದಿಂದಲೇ ಸಾಕಷ್ಟು ಸುದ್ದಿಯಾಗಿದ್ದ ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾದ ನಿವಾಸಿ, ಎರಡೂವರೆ ಅಡಿ (30 ಇಂಚು)ಯ ಕುಜ್ಜ ಅಜೀಂ ಮನ್ಸೂರಿ ಕೊನೆಗೂ ಹಸೆಮಣೆ ಏರಿದ್ದಾರೆ. ಬುಧವಾರ ಅಜೀಂ ಮನ್ಸೂರಿ ವರನ ವೇಷ ಧರಿಸಿ ಮೆರವಣಿಗೆಯೊಂದಿಗೆ ಹಾಪುರ್ ಜಿಲ್ಲೆಯ ನಿವಾಸಿ, 3 ಅಡಿಯ ವಧು ಬುಶ್ರಾ ಮನೆಗೆ ಆಗಮಿಸಿದರು.
ಎರಡೂವರೆ ಅಡಿ ಎತ್ತರದ ಅಜೀಂ ಮನ್ಸೂರಿ ಮದುವೆಯಾಗಲು ಅಡೆತಡೆಗಳನ್ನು ಎದುರಿಸಿದ್ದರು. 2019ರಿಂದ ಮದುವೆಗಾಗಿ ಹಲವು ಪ್ರಯತ್ನಗಳನ್ನು ಮಾಡುತ್ತಿದ್ದರು. ಅಜೀಂ ತಮ್ಮ ಮದುವೆಗಾಗಿ ಪೊಲೀಸ್ ಠಾಣೆಗಳನ್ನೂ ಸುತ್ತಿದ್ದರು. ಅಲ್ಲದೇ, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಸುದ್ದಿಯಾಗಿದ್ದರು.
ಮದುವೆಗೆ ಬಿಗಿ ಪೊಲೀಸ್ ಬಂದೋಬಸ್ತ್:ಕೊನೆಗೆ 2021ರ ಏಪ್ರಿಲ್ನಲ್ಲಿ ಹಾಪುರ್ ಜಿಲ್ಲೆಯ ಮೊಹಲ್ಲಾ ಮಜಿದ್‌ಪುರದ ನಿವಾಸಿ ಬುಶ್ರಾ ಅವರೊಂದಿಗೆ ಮದುವೆ ನಿಗದಿಯಾಗಿತ್ತು. ಇದೀಗ ಅಜೀಂ ಮನ್ಸೂರಿ ವಧು ಬುಶ್ರಾ ಅವರನ್ನು ವಿವಾಹವಾಗಿದ್ದಾರೆ. ಅಜೀಂ ಮೆರವಣಿಗೆಯೊಂದಿಗೆ ವಧುವಿನ ಮನೆಗೆ ತಲುಪುತ್ತಿದ್ದಂತೆಯೇ ಆತನೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಜನರ ದಂಡೇ ನೆರೆದಿತ್ತು. ಈ ವೇಳೆ ಜನಸಂದಣಿಯನ್ನು ನಿಭಾಯಿಸಲು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮದುವೆ ದಿನಾಂಕ ಬದಲು: ಅಜೀಂ ಮನ್ಸೂರಿ ಅವರನ್ನು ಈ ಮೊದಲು ನವೆಂಬರ್ 7ಕ್ಕೆ ಹಿರಿಯರು ನಿಗದಿ ಪಡಿಸಿದ್ದರು. ಆದರೆ, ಈ ವಿಷಯ ಬಹಿರಂಗವಾಗಿ ಅಜೀಂ ಮನ್ಸೂರಿ ಮತ್ತೆ ಸುದ್ದಿಯಾಗಿದ್ದರು. ಅಲ್ಲದೇ, ತನ್ನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಸೇರಿದಂತೆ ಅನೇಕರಿಗೆ ಆಹ್ವಾನವನ್ನೂ ಅಜೀಂ ಮನ್ಸೂರಿ ನೀಡಿದ್ದರು.