ನವದೆಹಲಿ:ಭಾರತದ ಭೂಪಟವನ್ನು ತಿರುಚಿ ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳನ್ನ ಪ್ರತ್ಯೇಕ ದೇಶಗಳು ಎಂದು ಪ್ರಕಟಿಸಿದ್ದ ಭೂಪಟವನ್ನು ಟ್ವಿಟರ್ ತೆಗೆದುಹಾಕಿದೆ.
ಟ್ವಿಟರ್‌ನ ಕೆರಿಯರ್ ವಿಭಾಗದ ಕಾರ್ಯನಿರ್ವಹಣಾ ಕಚೇರಿಗಳನ್ನು ಸೂಚಿಸುವ ಭೂಪಟದಲ್ಲಿ ಈ ರೀತಿಯ ತಪ್ಪನ್ನು ಟ್ವಿಟರ್ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅನೇಕರು ಟ್ವಿಟರ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಗ್ರಹಿಸಿದ್ದರು.
ಸಾಮಾಜಿಕ ಜಾಲತಾಣಗಳು ಮತ್ತು ಇತರ ಗಣ್ಯರ ಅಸಮಾಧಾನದ ಹಿನ್ನೆಲೆಯಲ್ಲಿ ಟ್ವಿಟರ್ ತಾನು ರಚಿಸಿದ್ದ ಭೂಪಟವನ್ನು ತನ್ನ ಸಾಮಾಜಿಕ ಜಾಲತಾಣದಿಂದ ತೆಗೆದುಹಾಕಿದೆ. ಭೂಪಟವನ್ನು ತೆಗೆದುಹಾಕಿ ಕೇವಲ ಕಚೇರಿಗಳಿರುವ ದೇಶದ ನಗರಗಳ ಹೆಸರುಗಳನ್ನು ಮಾತ್ರ ನಮೂದಿಸಿದೆ.
ಇದಿಷ್ಟೇ ಅಲ್ಲ, ಇತ್ತೀಚಿಗೆ ಕೇಂದ್ರ ಸರ್ಕಾರ ರೂಪಿಸಿದ ಹೊಸ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ಜಟಾಪಟಿ ಏರ್ಪಟ್ಟಿತ್ತು. ಸುಳ್ಳು ಮಾಹಿತಿ ತಡೆಯಲು ವಿಫಲವಾದ ಆರೋಪದಲ್ಲಿ ಟ್ವಿಟರ್ ವಿರುದ್ಧ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ದೂರು ದಾಖಲಾಗಿದೆ.