ನವದೆಹಲಿ: ನೂತನ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಗಳನ್ನು ಪಾಲಿಸದ ಕಾರಣದಿಂದಾಗಿ ಅದರಲ್ಲೂ ಹೊಸ ಕಾಯ್ದೆಯಲ್ಲಿ ಹೇಳುವಂತೆ ಕೆಲವು ಅಧಿಕಾರಿಗಳನ್ನು ನೇಮಿಸದ ಹಿನ್ನೆಲೆಯಲ್ಲಿ ಟ್ವಿಟರ್ (Twitter) ಭಾರತದಲ್ಲಿ ಕಾನೂನಾತ್ಮಕ ರಕ್ಷಣೆಯನ್ನು ಕಳೆದುಕೊಂಡಿದೆ. ಈ ಮಹತ್ವದ ಬೆಳವಣಿಗೆ ಬೆನ್ನಲ್ಲೇ ತಾನು ಕೇಂದ್ರ ಸರ್ಕಾರ ಕಾನೂನು ಪಾಲಿಸುವುದಾಗಿ ಟ್ವಿಟರ್ ಭರವಸೆ ನೀಡಿದೆ.
ಮೇ 25ರಂದು ಜಾರಿಗೆ ತರಲಾದ ಹೊಸ ಕಾಯ್ದೆಯ ನಿಯಮಗಳನ್ನು ಟ್ವಿಟರ್ ಪಾಲಿಸದ ಕಾರಣದಿಂದಾಗಿ 'ಬಳಕೆದಾರರ ಮಧ್ಯವರ್ತಿ'ಯಾಗಿ ಕಾರ್ಯನಿರ್ವಹಿಸಲು ಅದಕ್ಕೆ ಕಾನೂನು ರಕ್ಷಣೆ ನೀಡಲಾಗುತ್ತಿಲ್ಲ. ಟ್ವೀಟ್ ಪೋಸ್ಟ್ಗಳು ಆಕ್ಷೇಪಾರ್ಹವಾಗಿದ್ದಲ್ಲಿ ಭಾರತೀಯ ಕಾನೂನಿನ ಅಡಿಯಲ್ಲಿ ಟ್ವಿಟರ್ ಶಿಕ್ಷೆಗೆ ಒಳಪಡಬೇಕಾಗುತ್ತದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಮೂಲಕ ಮೂರನೇ ವ್ಯಕ್ತಿ ಹಾಕುವ ಪೋಸ್ಟ್ಗಳಿಗೂ ಟ್ವಿಟರ್ ಜವಾಬ್ದಾರನಾಗಿ ಇರಬೇಕಾಗುತ್ತದೆ. ಈಗಾಗಲೇ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಕೋಮು ಪ್ರಚೋದನೆ ನೀಡುವ ಆರೋಪದಲ್ಲಿ ಟ್ವಿಟರ್ ವಿರುದ್ಧ ದೂರು ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ದೂರು ಯಾವ ಕಾರಣಕ್ಕಾಗಿ?
ಜೂನ್ 5ರಂದು ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಹಿರಿಯ ಮುಸ್ಲಿಂ ವ್ಯಕ್ತಿಯೋರ್ವನನ್ನು ಹಲವರು ಥಳಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಟ್ವಿಟರ್ನಲ್ಲಿ ಪೋಸ್ಟ್ ಮಾಡಲಾಗಿದ್ದು, ಆಕ್ಷೇಪಾರ್ಹ, ಪ್ರಚೋದನಾತ್ಮಕ ವಿಷಯವನ್ನು ಟ್ವಿಟರ್ನಿಂದ ತೆಗೆಯದ ಆರೋಪದಲ್ಲಿ ವ್ಯಕ್ತಿಯೋರ್ವರು ದೂರು ನೀಡಿದ್ದರು. ಗಾಜಿಯಾಬಾದ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಮುಸ್ಲಿಂ ವ್ಯಕ್ತಿಯ ಗಡ್ಡವನ್ನು ಬಲವಂತವಾಗಿ ಕತ್ತರಿಸಿ, ವಂದೇ ಮಾತರಂ ಮತ್ತು ಜೈ ಶ್ರೀರಾಮ್ ಎಂದು ಹೇಳಲು ಒತ್ತಾಯಪಡಿಸಲಾಗಿತ್ತು. ಈ ವಿಚಾರದಲ್ಲಿ ಟ್ವಿಟರ್ ಮಾತ್ರವಲ್ಲದೇ ಹಲವು ಪತ್ರಕರ್ತರ ಮೇಲೆಯೂ ಎಫ್ಐಆರ್ ದಾಖಲಾಗಿದೆ.