ನವದೆಹಲಿ :ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಅವರ 'ಟೂಲ್ ಕಿಟ್' ಟ್ವೀಟ್ 'ತಿರುಚಲ್ಪಟ್ಟಿರುವ ಮೀಡಿಯಾ' ಎಂದು ಟ್ವಿಟರ್ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಗುರಿಯಾಗಿಸಿಕೊಂಡು ಕಾಂಗ್ರೆಸ್ ‘ಟೂಲ್‌ಕಿಟ್’ ಸಿದ್ಧಪಡಿಸಿದೆ ಎಂದು ಆರೋಪಿಸಿ ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ, ಟ್ವೀಟ್ ಮೂಲಕ ಹಂಚಿಕೊಂಡಿರುವ ಮಾಹಿತಿಗೆ ‘ತಿರುಚಲ್ಪಟ್ಟಿರುವ ಮಾಧ್ಯಮ’ ಎಂಬುದಾಗಿ ಟ್ವಿಟರ್ ತಿಳಿಸಿದೆ.
ಟ್ವೀಟ್ ಮೂಲಕ ಹಂಚಿಕೊಳ್ಳಲಾಗುವ ಇಂಥ ವಿಡಿಯೋ, ಧ್ವನಿಮುದ್ರಿಕೆ ಹಾಗೂ ಚಿತ್ರಗಳನ್ನು ತಪ್ಪುದಾರಿಗೆಳೆಯುವ ಉದ್ದೇಶದಿಂದ ತಿರುಚಿರುವುದು ಅಥವಾ ಕಲ್ಪಿತ ಮಾಹಿತಿ ಎಂಬುದಾಗಿ ಗುರುತು ಮಾಡಲಾಗುವುದು’ ಎಂದು ಟ್ವಿಟರ್ ಹೇಳಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಬಿಜೆಪಿ ನಾಯಕರ ಟ್ವಿಟರ್ ಖಾತೆಯನ್ನು ಅಮಾನತು ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ.
ಬಿಜೆಪಿ ಮಾಡಿರುವ ಟೂಲ್ ಕಿಟ್ ನಕಲಿ ಆರೋಪ ಎಂದಿರುವ ಕಾಂಗ್ರೆಸ್ ದೂರು ನೀಡಿದೆ. ಈ ಸಂಬಂಧ ಛತ್ತೀಸ್‌ಗಢ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಉದ್ದೇಶದಿಂದ ‘ಟೂಲ್‌ಕಿಟ್’ ಮೂಲಕ ಕಾಂಗ್ರೆಸ್ ಪಕ್ಷ ವಿವಾದಾತ್ಮಕ ವಿಷಯಗಳನ್ನು ಹರಿಬಿಟ್ಟಿದೆ ಎಂದು ಆರೋಪಿಸಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
‘ತಪ್ಪು ಮಾಹಿತಿಯನ್ನು ಹರಡಿ, ಆ ಮೂಲಕ ಬಿಜೆಪಿ ಮುಖಂಡರು ಸಮಾಜದ ಶಾಂತಿಗೆ ಭಂಗ ತರುವ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಕಾಂಗ್ರೆಸ್ ಆರೋಪಿಸಿದೆ.