ಇಂಫಾಲ, ಮಣಿಪುರ: ಹಿಜಾಬ್ ಧರಿಸಿಲ್ಲವೆಂದು ಶಿಕ್ಷಣಕ್ಕೆ ಅವಕಾಶ ನೀಡದಿರುವ, ಹಿಜಾಬ್ಗೆ ಅವಕಾಶ ನೀಡದಿದ್ದರೆ ತರಗತಿಗಳು, ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ ಎಂಬ ವಾದ-ಪ್ರತಿವಾದಗಳು ರಾಷ್ಟ್ರಾದ್ಯಂತ ನಡೆಯುತ್ತಿವೆ. ಎರಡೂ ವಾದ-ಪ್ರತಿವಾದಗಳಲ್ಲಿ ಶಿಕ್ಷಣ ಅನಾಥವಾಗಿದೆ. ಆದರೆ, ಶಿಕ್ಷಣದ ಮಹತ್ವವನ್ನು ಹೇಳುವ ಪುಟ್ಟ ಬಾಲಕಿಯೊಬ್ಬಳು ಇಲ್ಲಿದ್ದಾಳೆ. ಆ ಬಾಲಕಿಯ ಕತೆ ಹಿಜಾಬ್ ಪರ ಮತ್ತು ಹಿಜಾಬ್ ವಿರೋಧಿಗಳಿಗೆ ಖಂಡಿತಾ ಉತ್ತರವಾಗಬಲ್ಲದು.
ಆ ಪುಟ್ಟ ಬಾಲಕಿ ಹೆಸರು ಮೈನಿಂಗ್ಸಿನ್ಲಿಯು ಪಮೇಯಿ. ಮಣಿಪುರದಲ್ಲಿ ತಮೆಂಗ್ಲಾಂಗ್ ನಗರದಲ್ಲಿರುವ ಡೈಲಾಂಗ್ ಪ್ರಾಥಮಿಕ ಶಾಲೆಯ ನಾಲ್ಕನೇ ತರಗತಿ ವಿದ್ಯಾರ್ಥಿನಿ ಮೈನಿಂಗ್ಸಿನ್ಲಿಯು ಪಮೇಯಿ ಶಾಲೆಗೆ ಬರಬೇಕಾದರೆ ತನ್ನ ಪುಟ್ಟ ತಮ್ಮನನ್ನು ಕರೆತರುತ್ತಾಳೆ. ಪುಟ್ಟ ಬಾಲಕಿಗೊಬ್ಬ ಪುಟ್ಟ ತಮ್ಮ. ಶಾಲೆಗೆ ಕರೆತರುವುದು ಮಾತ್ರವಲ್ಲದೇ ಪಾಠಗಳು ನಡೆಯಬೇಕಾದರೆ ಕೂಡಾ ತಮ್ಮನನ್ನು ತನ್ನ ಜೊತೆಯಲ್ಲಿಯೇ ಜೋಪಾನವಾಗಿ ನೋಡಿಕೊಳ್ಳುತ್ತಾಳೆ.
ತಮ್ಮನಿಗೆ ನಿದ್ರೆ ಬಂದರೆ ತನ್ನದೇ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ. ಪಾಠಗಳು ನಡೆಯುತ್ತಿದ್ದರೂ ಕೂಡಾ ತಮ್ಮನನ್ನು ತನ್ನ ಪುಟ್ಟ ಮಡಿಲಲ್ಲೇ ಜೋಪಾನ ಮಾಡುತ್ತಾ ಶಿಕ್ಷಕರು ಹೇಳಿದ್ದನ್ನು ಬರೆದುಕೊಳ್ಳುತ್ತಾಳೆ ಮೈನಿಂಗ್ಸಿನ್ಲಿಯು ಪಮೇಯಿ. ಮಣಿಪುರದ ಸಚಿವರಾದ ಥಾಂಗಂ ಬಿಸ್ವಜಿತ್ ಸಿಂಗ್ ಅವರು ಟ್ವಿಟರ್ನಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದು, ಮೈನಿಂಗ್ಸಿನ್ಲಿಯು ಪಮೇಯಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ತಂದೆ, ತಾಯಿ ಇಬ್ಬರೂ ಕಾರ್ಮಿಕರು:ಮೈನಿಂಗ್ಸಿನ್ಲಿಯು ಪಮೇಯಿ ಅವರ ಕುಟುಂಬ ತೀರಾ ಕಡುಬಡತನದಲ್ಲಿರುವ ಕುಟುಂಬ. ಪಮೇಯಿ ಅವರ ತಂದೆ ತಾಯಿಗಳಿಬ್ಬರೂ ತೋಟದ ಕೆಲಸಕ್ಕೆ ತೆರಳುತ್ತಾರೆ. ಆಗ ಮಗುವನ್ನು ನೋಡಿಕೊಳ್ಳಲು ಮನೆಯಲ್ಲಿ ಯಾರೂ ಇರುವುದಿಲ್ಲ. ಈ ವೇಳೆ ಶಾಲೆಗೆ ತೆರಳಲೇಬೇಕೆಂಬ ಉದ್ದೇಶದಿಂದ ಪಮೇಯಿ ತನ್ನ ಎರಡು ವರ್ಷದ ತಮ್ಮನೊಂದಿಗೆ ಶಾಲೆಗೆ ಬರುತ್ತಾಳೆ.