ನವದೆಹಲಿ: ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟರ್ ಖಾತೆಯ ವೀಕ್ಷಣೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ನಿಖರವಾದ ಕಾರಣ ತಿಳಿಸಿಲ್ಲ. ಭಾರತ ಮತ್ತು ಪಾಕಿಸ್ತಾನದ ಐಟಿ ಸಚಿವಾಲಯದಿಂದಲೂ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಪಾಕ್ ಸರ್ಕಾರದ ಟ್ವಿಟರ್ ಖಾತೆಗಳು ಯುಎಸ್ ಮತ್ತು ಕೆನಡಾದಂತಹ ಇತರ ದೇಶಗಳಲ್ಲಿ ಸಕ್ರಿಯವಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದೀಗ ಟ್ವಿಟರ್ ಖಾತೆ ಪ್ರವೇಶಿಸಿದರೆ 'ಖಾತೆ ತಡೆಹಿಡಿಯಲಾಗಿದೆ' (Account withheld) ಎಂದು ತೋರಿಸುತ್ತದೆ.
3ನೇ ಬಾರಿಗೆ ನಿರ್ಬಂಧ:ಈ ಹಿಂದೆಯೂ ಪಾಕಿಸ್ಥಾನದ ಟ್ವಿಟರ್ ಖಾತೆಯನ್ನು ಭಾರತದಲ್ಲಿ ನಿರ್ಬಂಧಿಸಲಾಗಿತ್ತು. ಜುಲೈ 2022 ರಲ್ಲಿ ಮೊದಲ ಬಾರಿಗೆ ಅಲ್ಲಿನ ಸರ್ಕಾರದ ಅಧಿಕೃತ ಟ್ವಿಟರ್ ತಡೆಹಿಡಿದಿತ್ತು. ಅಕ್ಟೋಬರ್ ತಿಂಗಳಲ್ಲೂ ಖಾತೆಯನ್ನು ನಿರ್ಬಂಧಿಸಲಾಗಿತ್ತು. ಕೆಲವು ದಿನಗಳ ನಂತರ ಪುನಃ ಸಕ್ರಿಯಗೊಳಿಸಲಾಗಿತ್ತು. ಆಯಾ ದೇಶಗಳ ಕಾನೂನುಗಳನುಸಾರ ದೂರು ಕೇಳಿ ಬಂದರೆ ಟ್ವಿಟರ್ ಈ ರೀತಿ ಕ್ರಮಕ್ಕೆ ಮುಂದಾಗುತ್ತದೆ.