ಕರ್ನಾಟಕ

karnataka

ETV Bharat / bharat

ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದ ಟ್ವಿಟ್ಟರ್​ ಇಂಡಿಯಾ

ಕೇಂದ್ರದ ಹೊಸ ಐಟಿ ನಿಯಮದ ಪ್ರಕಾರ ಟ್ವಿಟ್ಟರ್(Twitter) ಮಧ್ಯಂತರ ಅನುಸರಣೆ ಅಧಿಕಾರಿಯನ್ನು ನೇಮಿಸಿದೆ. ಐಟಿ ಸಚಿವಾಲಯದ ಎಚ್ಚರಿಕೆಯ ಬಳಿಕ ಟ್ವಿಟ್ಟರ್ ಹೊಸ ನಿಯಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ.

Twitter appoints interim Chief
ಟ್ವಿಟ್ಟರ್ ಅಧಿಕಾರಿ ನೇಮಕ

By

Published : Jun 16, 2021, 7:41 AM IST

ನವದೆಹಲಿ:ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಕ ಮಾಡಿರುವುದಾಗಿ ಟ್ವಿಟ್ಟರ್​​ ತಿಳಿಸಿದ್ದು, ಅಧಿಕಾರಿಯ ವಿವರಗಳನ್ನು ಶೀಘ್ರದಲ್ಲೇ ಮಾಹಿತಿ ತಂತ್ರಜ್ಞಾನ (ಐಟಿ) ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು ಎಂದು ಹೇಳಿದೆ. ನೂತನ ಐಟಿ ನಿಯಮಗಳನ್ನು ಅಳವಡಿಸಿಕೊಳ್ಳಲು ಕೊನೆಯ ಅವಕಾಶ ನೀಡಿ ಐಟಿ ಸಚಿವಾಲಯ ಟ್ವಿಟ್ಟರ್​ಗೆ ನೋಟಿಸ್ ಜಾರಿ ಮಾಡಿತ್ತು.

ನೂತನ ಕಾನೂನಿನಂತೆ ಶೀಘ್ರದಲ್ಲಿ ಅನುಸರಣೆ ಅಧಿಕಾರಿ (ಮಾನದಂಡಗಳ ಅನುಸರಣೆ) ಯನ್ನು ನೇಮಕ ಮಾಡಿಕೊಳ್ಳದಿದ್ದರೆ ಐಟಿ ಸಚಿವಾಲಯದಿಂದ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು. ಇದರ ಬೆನ್ನಲ್ಲೇ, ಹೊಸ ಐಟಿ ನಿಯಮಗಳ ಪ್ರಕಾರ ಮುಖ್ಯ ಅನುಸರಣೆ ಅಧಿಕಾರಿಯ ನೇಮಕವನ್ನು ಅಂತಿಮಗೊಳಿಸುವ ಹಂತದಲ್ಲಿದೆ. ಒಂದು ವಾರದೊಳಗೆ ಹೆಚ್ಚುವರಿ ವಿವರಗಳನ್ನು ಸಲ್ಲಿಸುವುದಾಗಿ ಟ್ವಿಟರ್ ಸರ್ಕಾರಕ್ಕೆ ಭರವಸೆ ನೀಡಿತ್ತು.

ಕಂಪನಿಯು ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಎಲ್ಲಾ ಪ್ರಯತ್ನಗಳನ್ನು ಮುಂದುವರೆಸಿದೆ. ಐಟಿ ಸಚಿವಾಲಯಕ್ಕೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಪ್ರಗತಿಯ ಮಾಹಿತಿಯನ್ನು ತಿಳಿಸುತ್ತಿದೆ. ಮಧ್ಯಂತರ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿಕೊಳ್ಳಲಾಗಿದ್ದು, ಶೀಘ್ರದಲ್ಲೇ ಆ ಬಗ್ಗೆ ಐಟಿ ಸಚಿವಾಲಯದೊಂದಿಗೆ ಮಾಹಿತಿ ಹಂಚಿಕೊಳ್ಳಲಾಗುವುದು ಎಂದು ಟ್ವಿಟ್ಟರ್​ ವಕ್ತಾರರು ಹೇಳಿದ್ದಾರೆ.

ಮುಖ್ಯ ಅನುಸರಣೆ ಅಧಿಕಾರಿಯ ಕೆಲಸವೇನು?

ಕೇಂದ್ರ ಹೊಸ ಐಟಿ ನಿಯಮಗಳ ಪ್ರಕಾರ ಟ್ವಿಟ್ಟರ್​​ ನೇಮಕ ಮಾಡಿಕೊಂಡಿರುವ ಅನುಸರಣೆ ಅಧಿಕಾರಿ, ಹೊಸ ಕಾನೂನಿನ ನಿಯಮಗಳನ್ನು ಸಂಸ್ಥೆಯಲ್ಲಿ ಅಳವಡಿಸಿಕೊಳ್ಳಲು ಕೆಲಸ ಮಾಡುತ್ತಾರೆ. ಹೊಸ ನಿಯಮದ ಪ್ರಕಾರ ಟ್ವಿಟ್ಟರ್​​ನ ಸಾಮುದಾಯಿಕ ಮಾನದಂಡಗಳನ್ನು ರೂಪಿಸುವ ಜವಾಬ್ದಾರಿಯು ಇವರ ಮೇಲಿರಲಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಕಾನೂನು ಪರಿಮಿತಿ ಮೀರುವವರ ಮೇಲೆ ನಿಗಾ ಇಡಲಿದ್ದಾರೆ.

ಹೊಸ ಕಾನೂನು ಮತ್ತು ಟ್ವಿಟ್ಟರ್​:

ಕೇಂದ್ರದ ಪರಿಷ್ಕೃತ ಐಟಿ ನಿಯಮಗಳನ್ನು ಒಪ್ಪಿಕೊಳ್ಳಲು ಸಾಮಾಜಿಕ ಜಾಲತಾಣಗಳಾದ ಟ್ವಿಟ್ಟರ್​, ವಾಟ್ಸ್​ ಆ್ಯಪ್, ಫೇಸ್​ಬುಕ್​ ಆಸಕ್ತಿ ತೋರಿಸಲಿಲ್ಲ. ಅಲ್ಲದೆ, ಹೊಸ ಕಾನೂನುಗಳನ್ನು ತೀವ್ರವಾಗಿ ವಿರೋಧಿಸಿತ್ತು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಾಟ್ಸ್​ ಆ್ಯಪ್​ ಈಗಾಗಲೇ ಕಾನೂನು ಸಮರ ಮುಂದುವರೆಸಿದೆ.

ಟ್ವಿಟ್ಟರ್ ಕೂಡ ಹೊಸ ಕಾನೂನುಗಳನ್ನು ಅಳವಡಿಸಿಕೊಳ್ಳಲು ಹಿಂದೇಟು ಹಾಕಿತ್ತು. ಆದರೆ, ಬಳಿಕ ಕೇಂದ್ರದ ಎಚ್ಚರಿಕೆಯನ್ನು ಪರಿಗಣಿಸಿ ಕ್ರಮೇಣ ನಿಯಮಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದೆ. ಅದರ ಪ್ರಮುಖ ಹಂತವಾಗಿ ಈಗ ಅನುಸರಣೆ ಅಧಿಕಾರಿಯನ್ನು ನೇಮಿಸಿದೆ.

ಹೊಸ ಕಾನೂನಿಗೆ ವಿರೋಧ ಯಾಕೆ?

ಕೇಂದ್ರದ ಹೊಸ ಕಾನೂನುಗಳು ಸಾಮಾಜಿಕ ಜಾಲತಾಣಗಳ ಮೇಲೆ ಸರ್ವಾಧಿಕಾರಿ ಧೋರಣೆಯನ್ನು ಹೊಂದಿದೆ. ಸರ್ಕಾರ ಕೇಳಿದಾಗ ಗ್ರಾಹಕರ ಮಾಹಿತಿ ನೀಡಲು ಸಾಧ್ಯವಿಲ್ಲ. ಇದು ಗ್ರಾಹಕರ ಗೌಪ್ಯತೆಗೆ ದಕ್ಕೆ ತರುತ್ತದೆ ಎಂಬಿತ್ಯಾದಿ ಕಾರಣಗಳನ್ನು ನೀಡಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಹೊಸ ಐಟಿ ನಿಯಮಕ್ಕೆ ವಿರೋಧ ವ್ಯಕ್ತಪಡಿಸಿವೆ.

ಕೋರ್ಟ್​ ಮೆಟ್ಟಿಲೇರಿದ ವಾಟ್ಸ್​ ಆ್ಯಪ್:

ಒಂದು ಹೆಜ್ಜೆ ಮುಂದೆ ಹೋಗಿರುವ ವಾಟ್ಸ್ ಆ್ಯಪ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದು, ಹೊಸ ನಿಯಮಗಳ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ. ಗ್ರಾಹಕರ ಮಾಹಿತಿ ಸರ್ಕಾರ ಕೊಡಲು ಸಾಧ್ಯವಿಲ್ಲ. ಗ್ರಾಹಕರ ಗೌಪ್ಯತೆ ನಮ್ಮ ಡಿಎನ್​ಎ ಎಂದು ಅದು ಹೇಳಿದೆ.

ABOUT THE AUTHOR

...view details