ಸಾಂಗ್ಲಿ(ಮಹಾರಾಷ್ಟ್ರ): ಸಂಜೆ ಏಳು ಗಂಟೆಯಾಗುತ್ತಿದ್ದಂತೆ ಈ ಗ್ರಾಮದಲ್ಲಿ ಸೈರನ್ ಮೊಳಗುತ್ತದೆ. ತಕ್ಷಣವೇ ಗ್ರಾಮದ ಎಲ್ಲ ಮನೆಗಳಲ್ಲಿ ಟಿವಿ ಮತ್ತು ಮೊಬೈಲ್ಗಳು ಬಂದ್ ಆಗುತ್ತವೆ. ಬೆಳಗಾವಿ ಗಡಿಯಲ್ಲಿರುವ ಸಾಂಗ್ಲಿ ಜಿಲ್ಲೆಯ ಮೊಹಿತೆ ವಡಗಾಂವ್ ಗ್ರಾಮದಲ್ಲಿ ಕಳೆದ ಒಂದು ತಿಂಗಳಿಂದ ಇದೇ ರೀತಿ ನಡೆಯುತ್ತಿದೆ.
ಕೊರೊನಾ ಸಮಯದಲ್ಲಿ ಶಾಲೆಗಳಿಗೆಲ್ಲ ಬೀಗ ಹಾಕಿ ಆನ್ಲೈನ್ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿತ್ತು. ಆನ್ಲೈನ್ ಶಿಕ್ಷಣದಿಂದಾಗಿ ಮಕ್ಕಳು ಮೊಬೈಲ್ ನೋಡುವುದು ಹೆಚ್ಚಾಗಿ, ಪೋಷಕರು, ಶಿಕ್ಷಕರಿಗೂ ಚಿಂತೆ ಹೆಚ್ಚಾಗಿತ್ತು. ಹೆಚ್ಚಿನ ಜನ ಟಿವಿ, ಮೊಬೈಲ್ನಲ್ಲೇ ಕಾಲ ಕಳೆಯುವಂತಾಗಿತ್ತು. ಕೊರೊನಾ ಪರಿಸ್ಥಿತಿ ತಿಳಿಯಾದ ಬಳಿಕವೂ ಇದೇ ರೀತಿ ಮುಂದುವರೆದಿರುವುದು ಇನ್ನೂ ಹೆಚ್ಚಿನ ಆತಂಕಕ್ಕೆ ಕಾರಣವಾಗಿದೆ.
ಇದು ಶಿಕ್ಷಣ ಮತ್ತು ಒಬ್ಬರನ್ನೊಬ್ಬರು ಪರಸ್ಪರ ಭೇಟಿಯಾಗುವ, ಮಾತನಾಡುವ ಹವ್ಯಾಸಗಳಿಗೆಲ್ಲ ಬ್ರೇಕ್ ಹಾಕಿರುವುದನ್ನು ಮನಗಂಡ ಮೊಹಿತೆ ವಡಗಾಂವ್ ಗ್ರಾಮಸ್ಥರು ದಿನದ ಕೆಲ ಗಂಟೆಗಳ ಕಾಲ ಮೊಬೈಲ್ ಟಿವಿ ನಿಷೇಧಿಸುವ ನಿರ್ಧಾರ ಕೈಗೊಂಡಿದ್ದಾರೆ. ಜಿಲ್ಲೆಯ ಮೊಹಿತೆ ವಡಗಾಂವ್ ಗ್ರಾಮಸ್ಥರೆಲ್ಲರೂ ಸೇರಿಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ.
ಮೂರು ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಮಕ್ಕಳ ಶಿಕ್ಷಣದ ಗುಣಮಟ್ಟ ಕುಸಿಯುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿತ್ತು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು ಅಗತ್ಯ ಎಂಬುದನ್ನು ಮನಗಂಡ ಗ್ರಾಮ ಪಂಚಾಯತ್ ಸದಸ್ಯರು, ಮೊದಲು ತಮ್ಮ ಸಭೆ ನಡೆಸಿದ್ದಾರೆ. ಬಳಿಕ ಆಗಸ್ಟ್ 14 ರಂದು ಗ್ರಾಮದ ಮಹಿಳಾ ಸಭೆ ನಡೆಸಿ ಮಕ್ಕಳ ಅಭ್ಯಾಸಕ್ಕೆ ಎದುರಾಗುತ್ತಿರುವ ಅಡ್ಡಿ ಆತಂಕಗಳ ಬಗ್ಗೆ ಗಂಭೀರವಾಗಿ ಚರ್ಚಿಸಲಾಯಿತು.
ಸೈರನ್ ಮೊಳಗುತ್ತಿದ್ದಂತೆ ಈ ಗ್ರಾಮದಲ್ಲಿ ಟಿವಿ ಮೊಬೈಲ್ ಸ್ವಿಚ್ ಆಫ್ ಮೊಬೈಲ್ ಬಳಕೆ ಸಮಸ್ಯೆ ಪರಿಹಾರಕ್ಕಾಗಿ ಈ ಕ್ರಮ:ಮನೆಯಲ್ಲಿ ಸತತ ಮೊಬೈಲ್ ಬಳಕೆ ಮತ್ತು ಟಿವಿ ವೀಕ್ಷಣೆಯೇ ಇದಕ್ಕೆ ಪ್ರಮುಖ ಕಾರಣ ಎಂಬುದು ಎಲ್ಲರಿಂದಲೂ ಅಭಿಪ್ರಾಯ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಪ್ರತಿದಿನ ಸಂಜೆ ಸುಮಾರು ಎರಡು ಗಂಟೆಗಳ ಕಾಲ ಗ್ರಾಮದ ಮನೆಯಲ್ಲಿ ಟಿವಿ ಮತ್ತು ಮೊಬೈಲ್ ಬಂದ್ ಮಾಡಿ ಮಕ್ಕಳ ಶಿಕ್ಷಣ, ಮನೆಪಾಠಕ್ಕೆ ಒತ್ತು ನೀಡುವ ನಿರ್ಧಾರ ಕೈಗೊಳ್ಳಲಾಯಿತೆಂದು ಪಂಚಾಯತ್ ಮುಖ್ಯಸ್ಥ ವಿಜಯ ಮೊಹಿತೆ ತಿಳಿಸಿದ್ದಾರೆ.
ಸಂಜೆ ಏಳು ಗಂಟೆಯಾಗುತ್ತಿದ್ದಂತೆ ಗ್ರಾಮದಲ್ಲಿ ಸೈರನ್ ಮೊಳಗಿಸಲಾಗುತ್ತದೆ. ಬಳಿಕ ಕಡ್ಡಾಯವಾಗಿ ಎಲ್ಲರ ಮನೆಯಲ್ಲಿ ಮೊಬೈಲ್ ಬಳಕೆ ಮತ್ತು ಟಿವಿಯನ್ನು ಬಂದ್ ಮಾಡಲಾಗುತ್ತದೆ. ಏಳು ಗಂಟೆಯಿಂದ 8.30 ರವರೆಗೆ ಮನೆಯಲ್ಲಿ ಮಕ್ಕಳು ಸಂಪೂರ್ಣವಾಗಿ ಅಭ್ಯಾಸದಲ್ಲಿ ತೊಡಗುತ್ತಾರೆ. ಮನೆಯಲ್ಲಿ ಇದನ್ನು ಪಾಲಿಸಲಾಗುತ್ತಿದೆಯೋ ಇಲ್ಲವೋ ಎಂಬುದನ್ನು ಆಶಾ ಕಾರ್ಯಕರ್ತೆಯರು ಮತ್ತು ಇತರರು ಪರಿಶೀಲಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಕ್ಕಳ ಹಿತ ದೃಷ್ಟಿಯಿಂದ ಮಹಿಳೆಯರಿಂದಲೂ ಒಪ್ಪಿಗೆ:ಸಂಜೆ 7 ರಿಂದ 8.30 ರ ಸಮಯದಲ್ಲೇ ಪ್ರಮುಖ ಧಾರಾವಾಹಿ ಮತ್ತು ಕಾರ್ಯಕ್ರಮಗಳು ಟಿವಿಯಲ್ಲಿ ಪ್ರಸಾರವಾಗುವ ಕಾರಣ ಮೊದಲು ಇದನ್ನು ಒಪ್ಪಿಕೊಳ್ಳುವುದು ಮಹಿಳೆಯರಿಗೆ ಕಠಿಣವಾಗಿತ್ತು. ಆದರೆ ಮಕ್ಕಳ ಹಿತದೃಷ್ಟಿಯಿಂದ ಇದು ಅಗತ್ಯವೆಂದು ಮನವರಿಕೆಯಾದ ಬಳಿಕ ಎಲ್ಲರೂ ಒಪ್ಪಿಕೊಂಡರು ಎಂದು ಗ್ರಾಮದ ಮಹಿಳೆಯರು ತಿಳಿಸಿದ್ದಾರೆ.
ದೇವಸ್ಥಾನದಿಂದ ಆರಂಭದಲ್ಲಿ 7 ಗಂಟೆಗೆ ಮತ್ತು 8.30ಕ್ಕೆ ಸೈರನ್ ಮೊಳಗಿಸಲಾಗುತ್ತದೆ. ಮಕ್ಕಳ ಶಿಕ್ಷಣವಷ್ಟೇ ಅಲ್ಲದೇ ಗ್ರಾಮಸ್ಥರು ಸಹ ಈ ಸಮಯದಲ್ಲಿ ಪರಸ್ಪರ ಮಾತುಕತೆ, ಚರ್ಚೆ ನಡೆಸುವ ಉದ್ದೇಶವೂ ಈಡೇರಿದಂತಾಗಿದೆ.
ಇದನ್ನೂ ಓದಿ:ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ.. ಕೊನೆಗೂ ಈಡೇರಿತು ವಿಜಯಪುರದ ಶಿಕ್ಷಣ ಪ್ರೇಮಿಯ ಬೇಡಿಕೆ