ಮುಂಬೈ:ಕಿರುತೆರೆ ನಟ ಇಮ್ರಾನ್ ನಜೀರ್ ಖಾನ್ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದನ್ನು ಹೇಳಿದ್ದಾರೆ. ಅಫ್ತಾಬ್ ಪೂನಾವಾಲಾನಿಂದ ಹತ್ಯೆಗೀಡಾದ ಶ್ರದ್ಧಾ, ಕಳೆದ ಎರಡು ವರ್ಷಗಳ ಹಿಂದೆ ಗೆಳೆಯ ಮಾದಕ ವ್ಯಸನಿಯಾಗಿದ್ದಾನೆ ಎಂದು ಹೇಳಿದ್ದಳಂತೆ. ಅಲ್ಲದೇ ಆತನನ್ನು ಅದರಿಂದ ದೂರ ಮಾಡಲು ಸಹಾಯವನ್ನು ಶ್ರದ್ಧಾ ಕೇಳಿದ್ದಳು ಎಂದು ನಟ ಇಮ್ರಾನ್ ವಿಡಿಯೋದಲ್ಲಿ ಹೇಳಿದ್ದಾರೆ.
ಇಮ್ರಾನ್ ನಜೀರ್ ಖಾನ್ ಅವರು ಮುಂಬೈನಿಂದ ಕಾಶ್ಮೀರದ ಕುಪ್ವಾರದ ಚೌಕಿಬಾಲ್‌ನಲ್ಲಿರುವ ಅವರ ಮನೆಗೆ ತೆರಳಿದ್ದರಂತೆ. ಹಾಗಾಗಿ ಮುಂಬೈನಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅವರಿಗೆ ತಿಳಿದಿರಲಿಲ್ಲವಂತೆ. ಸೋಮವಾರ ಬೆಳಗ್ಗೆ ಮುಂಬೈಗೆ ಹಿಂತಿರುಗಿದ ಅವರು, ಎಲ್ಲಾ ಸುದ್ದಿ ವಾಹಿನಿಗಳಲ್ಲಿ ಶ್ರದ್ಧಾ ವಾಲ್ಕರ್ ಸಾವಿನ ಸುದ್ದಿಯನ್ನು ನೋಡಿ ಆಘಾತಕ್ಕೊಳಗಾದ್ದಾರೆ. ಅಲ್ಲದೇ ಶ್ರದ್ಧಾ ನನಗೆ ಪರಿಚಿತಳು, ಅವಳು ನರಕದ ಜೀವನವನ್ನು ನಡೆಸುತ್ತಿರುವುದಾಗಿ ಫೆ. 2021ರಲ್ಲಿ ಹೇಳಿದ್ದಳು ಎಂದು ನಜೀರ್ ಖಾನ್ ಹೇಳಿದ್ದಾರೆ.