ನವದೆಹಲಿ :ದೆಹಲಿ ವಿಧಾನಸಭೆಯಲ್ಲಿ ಗುರುವಾರ ಸುರಂಗದಂತಹ ರಚನೆ ಪತ್ತೆಯಾಗಿದೆ. ಈ ಸುರಂಗವು ದೆಹಲಿ ವಿಧಾನಸಭೆಯಿಂದ ಕೆಂಪುಕೋಟೆಗೆ ಸಂಪರ್ಕ ಕಲ್ಪಿಸುತ್ತದೆ. ಬ್ರಿಟಿಷ್ ಕಂಪನಿ ಸರ್ಕಾರ, ಸ್ವಾತಂತ್ರ್ಯ ಹೋರಾಟಗಾರರನ್ನು ಗಲ್ಲಿಗೇರಿಸುವಾಗ ಜನರಿಂದ ಪ್ರತೀಕಾರದಂಥಹ ಕ್ರಮಗಳಿಂದ ತಪ್ಪಿಸಿಕೊಳ್ಳಲು ಈ ಸುರಂಗವನ್ನು ಬಳಸುತ್ತಿದ್ದರು ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಎಎನ್ಐಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮತ್ತಷ್ಟು ಮಾಹಿತಿ ನೀಡಿರುವ ಅವರು, ನಾನು 1993ರಲ್ಲಿ ಶಾಸಕನಾದಾಗ ಕೆಂಪುಕೋಟೆಯವರೆಗೆ ಇರುವ ಸುರಂಗ ಮಾರ್ಗದ ಬಗ್ಗೆ ಕೇಳಿದ್ದೆನು. ಅದರ ಇತಿಹಾಸವನ್ನು ಹುಡುಕಲು ಪ್ರಯತ್ನಿಸಿದ್ದು, ಮಾಹಿತಿ ಸ್ಪಷ್ಟವಾಗಿರಲಿಲ್ಲ ಅಂತಾ ರಾಮ್ ನಿವಾಸ್ ಗೋಯೆಲ್ ಹೇಳಿದ್ದಾರೆ.
ಈಗ ನಾವು ಸುರಂಗದ ಆರಂಭವನ್ನು ಮಾತ್ರವೇ ನೋಡುತ್ತಿದ್ದೇವೆ. ಮೆಟ್ರೋ ಯೋಜನೆಗಳು ಮತ್ತು ಒಳಚರಂಡಿ ಸ್ಥಾಪನೆಯಿಂದಾಗಿ ಸುರಂಗದ ಎಲ್ಲಾ ಮಾರ್ಗಗಳು ನಾಶವಾಗಿರುವುದರಿಂದ, ಅದನ್ನು ಮತ್ತಷ್ಟು ಉತ್ಖನನ ಮಾಡುತ್ತಿಲ್ಲ ಎಂದು ಗೋಯೆಲ್ ಸ್ಪಷ್ಟಪಡಿಸಿದ್ದಾರೆ.