ಕರ್ನಾಟಕ

karnataka

ETV Bharat / bharat

ಶೀಜಾನ್ ಖಾನ್ ಸಂಪರ್ಕದ ನಂತರ ತುಂಬಾ ಬದಲಾಗಿದ್ದ ತುನಿಶಾ ಶರ್ಮಾ: ಹಿಜಾಬ್ ಸಹ ಧರಿಸುತ್ತಿದ್ದಳು: ಕುಟುಂಬದ ಆರೋಪ - ತುನಿಶಾ ಶರ್ಮಾ

ಕಿರುತೆರೆ ನಟಿ ತುನಿಶಾ ಶರ್ಮಾ ಸಾವಿನ ಪ್ರಕರಣವು ಸಿನಿಮಾ ರಂಗದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಹನಟ ಶೀಜಾನ್ ಖಾನ್​ನೊಂದಿಗೆ ಗೆಳೆತನ ಹೊಂದಿದ್ದ ತುನಿಶಾ ನೊಂದಿದ್ದರು ಎಂದು ಹೇಳಲಾಗುತ್ತಿದೆ. ಇದರ ನಡುವೆ ಶೀಜಾನ್‌ ಸಂಪರ್ಕದ ನಂತರ ಆಕೆ ತುಂಬಾ ಬದಲಾಗಿದ್ದಳು ಎಂದೂ ಕುಟುಂಬಸ್ಥರು ಹೇಳಿದ್ದಾರೆ.

tunisha-sharma-suicide-case-sheezan-custody-extended
ಶೀಜಾನ್ ಖಾನ್ ಸಂಪರ್ಕದ ನಂತರ ತುಂಬಾ ಬದಲಾಗಿದ್ದ ತುನಿಶಾ ಶರ್ಮಾ

By

Published : Dec 28, 2022, 7:42 PM IST

ಮುಂಬೈ (ಮಹಾರಾಷ್ಟ್ರ): ನಟಿ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತನಾದ ಆಕೆಯ ಸಹನಟ ಹಾಗೂ ಮಾಜಿ ಗೆಳೆಯ ಶೀಜಾನ್ ಖಾನ್​ನ ಪೊಲೀಸ್​ ಕಸ್ಟಡಿಯ ಅವಧಿಯನ್ನು ಡಿಸೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಇದರ ನಡುವೆ ತುನಿಶಾರ ಕುಟುಂಬಸ್ಥರು ಹೊಸ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ನಟಿ ಹಿಜಾಬ್​ ಸಹ ಧರಿಸುವುದಕ್ಕೂ ಆರಂಭಿಸಿದ್ದರು ಎಂದು ಹತ್ತಿರದ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ಆರೋಪ: ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ತುನಿಶಾ ಶರ್ಮಾ (20) ಇದೇ ಡಿ.24ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲಿಬಾಬಾ - ದಸ್ತಾನ್ - ಎ - ಕಾಬೂಲ್‌ ಎಂಬ ಟಿವಿ ಶೋನ ಸೆಟ್‌ನಲ್ಲಿ ತುನಿಶಾ ಶವವಾಗಿ ಪತ್ತೆಯಾಗಿದ್ದರು. ಸಹನಟನಾದ ಶೀಜಾನ್​ ಖಾನ್​ನೊಂದಿಗೆ ಸ್ನೇಹ ಮತ್ತು ಪ್ರೀತಿ ಹೊಂದಿದ್ದ ತುನಿಶಾ ಆತ್ಮಹತ್ಯೆಗೆ 15 ದಿನಗಳ ಮುನ್ನವಷ್ಟೇ ಬೇರ್ಪಟ್ಟಿದ್ದರು. ಇದರ ಮರು ದಿನವೇ ಶೀಜಾನ್ ಖಾನ್​ನನ್ನು ಆತ್ಮಹತ್ಯೆಗೆ ಪ್ರಚೋದನೆ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದರು.

ಇದನ್ನೂ ಓದಿ:ಟಿವಿ ಧಾರಾವಾಹಿ ಸೆಟ್‌ನಲ್ಲೇ ಕಿರುತೆರೆ ನಟಿ ಆತ್ಮಹತ್ಯೆ

ಈ ಮೊದಲು ನಾಲ್ಕು ದಿನಗಳ ಕಾಲ ನ್ಯಾಯಾಲಯವು ಆರೋಪಿಯನ್ನು ಪೊಲೀಸ್​ ಕಸ್ಟಡಿಗೆ ಒಪ್ಪಿಸಿತ್ತು. ಇಂದಿಗೆ ಪೊಲೀಸ್ ಕಸ್ಟಡಿ ಕೊನೆಗೊಂಡಿದ್ದರಿಂದ ಪೊಲೀಸರು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ಮತ್ತೆ ಎರಡು ದಿನಗಳ ಕಾಲ ಪೊಲೀಸ್​ ಕಸ್ಟಡಿಯ ಅವಧಿಯನ್ನು ಇಲ್ಲಿನ ವಸಾಯ್ ನ್ಯಾಯಾಲಯ ವಿಸ್ತರಿಸಿ ಆದೇಶಿಸಿದೆ.

250ರಿಂದ 300 ಪುಟಗಳ ಚಾಟಿಂಗ್​ ವಶಕ್ಕೆ: ಮತ್ತೊಂದೆಡೆ ತುನಿಶಾ ಶರ್ಮಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಇದರ ಭಾಗವಾಗಿ ತುನಿಶಾ ಮತ್ತು ಶೀಜಾನ್ ಖಾನ್ ನಡುವಿನ ವಾಟ್ಸ್​ಆ್ಯಪ್​ ಚಾಟಿಂಗ್​ನ ದತ್ತಾಂಶವನ್ನು ಕಲೆ ಹಾಕಿದ್ದಾರೆ. ಮೂಲಗಳ ಪ್ರಕಾರ, ಕಳೆದ ಜೂನ್‌ನಿಂದ ಡಿಸೆಂಬರ್‌ವರೆಗೆ ಇಬ್ಬರ ಮಧ್ಯೆದ ಸುಮಾರು 250ರಿಂದ 300 ಪುಟಗಳ ಚಾಟಿಂಗ್​ ಮಾಹಿತಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನೂ ಓದಿ:ನಟಿ ತುನಿಶಾ ಶರ್ಮಾ ಆತ್ಮಹತ್ಯೆ: ಸಹನಟ ಶೀಝಾನ್ ಖಾನ್ ಪೊಲೀಸ್​ ಕಸ್ಟಡಿಗೆ

ಈ ಮೂಲಕ ಈ ತಾರೆಗಳು ಬೇರೆಯಾಗಲು ನಿರ್ಧರಿಸಿದ್ದ ನಿಜವಾದ ಕಾರಣ ಮತ್ತು ನೈಜತೆ ತಿಳಿಯಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದುವೆರೆಗೆ ವಶಕ್ಕೆ ಪಡೆದಿರುವ ಚಾಟಿಂಗ್​ ಮತ್ತು ರೆಕಾರ್ಡಿಂಗ್‌ಗಳ ಮಾಹಿತಿಯಲ್ಲಿ ಯಾವುದೇ ಆಕ್ಷೇಪಾರ್ಹವಾದ ಅಂಶ ಸದ್ಯಕ್ಕೆ ಕಂಡು ಬಂದಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಳಿಸಲಾದ ಚಾಟಿಂಗ್​ ಪಡೆಯಲೂ ಯತ್ನ:ಇದೇ ವೇಳೆ, ಆರೋಪಿ ಶೀಜಾನ್ ಖಾನ್​ ಅಳಿಸಿದ ವಾಟ್ಸ್​ಆ್ಯಪ್​ ಚಾಟಿಂಗ್​ ಸಹ ಪತ್ತೆ ಹಚ್ಚಲು ಸಹ ಪೊಲೀಸರು ಯತ್ನಿಸುತ್ತಿದ್ದಾರೆ. ಅಲ್ಲದೇ, ತುನಿಶಾ ಮಾತ್ರವಲ್ಲದೇ, ಶೀಜಾನ್​ ಖಾನ್​ಗೆ ಮತ್ತೊಬ್ಬ ಗೆಳತಿ ಇದ್ದಳು ಎಂಬ ಅನುಮಾನ ಸಹ ವ್ಯಕ್ತವಾಗಿದೆ. ಆದರೆ, ಆರೋಪಿಯು ಆ ರಹಸ್ಯ ಗೆಳತಿ ಜೊತೆಗಿನ ಚಾಟಿಂಗ್​ ಅಳಿಸಿಹಾಕಿದ್ದಾನೆ ಎಂದೂ ಹೇಳಲಾಗುತ್ತಿದೆ.

ಇದನ್ನೂ ಓದಿ:ಶೀಝಾನ್​ ಖಾನ್​ಗೆ ಕಠಿಣ ಶಿಕ್ಷೆಯಾಗಬೇಕು: ತುನಿಶಾ ತಾಯಿ ಆಗ್ರಹ

ಆದ್ದರಿಂದ ರಹಸ್ಯ ಗೆಳತಿ ನಡುವಿನ ಅಳಿಸಲಾದ ಚಾಟಿಂಗ್​ ಮಾಹಿತಿ ಸಂಗ್ರಹಿಸಲು ವಾಟ್ಸ್​ಆ್ಯಪ್​ ಸಂಸ್ಥೆಗೆ ಇ - ಮೇಲ್ ಮೂಲಕ ಪೊಲೀಸರು ಸಂಪರ್ಕಿಸಿದ್ದಾರೆ. ಜೊತೆಗೆ ಈಗಾಗಲೇ ಶೀಜಾನ್‌ನ ಆ ರಹಸ್ಯ ಗೆಳತಿ ಗುರುತಿಸಲಾಗಿದ್ದು, ಶೀಘ್ರದಲ್ಲೇ ಪೊಲೀಸರು ವಿಚಾರಣೆ ನಡೆಸಲಿದ್ದಾರೆ ಎಂದೂ ಅಧಿಕಾರಿ ಮಾಹಿತಿ ನೀಡಿದ್ದಾರೆ.

2018ರಲ್ಲೇ ತುನಿಶಾಗೆ ಖಿನ್ನತೆ?:2018ರಲ್ಲಿ ತುನಿಶಾ ಶರ್ಮಾ ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿದ್ದರು. ಕೆಲವು ತಿಂಗಳ ಹಿಂದೆ ಕೂಡ ಮಾನಸಿಕ ಆಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ವರದಿಯಾಗಿದೆ. ಅಲ್ಲದೇ, ತುನಿಶಾ ತನ್ನ ಬ್ರೇಕಪ್‌ನಿಂದ ಅಸಮಾಧಾನಗೊಂಡಿದ್ದಳು ಮತ್ತು ಆತಂಕದಿಂದಲೂ ಬಳಲುತ್ತಿದ್ದಳು. ಇಬ್ಬರು ಬೇರೆಯಾದ ನಂತರದಿಂದ ಒಂಟಿತನ ಅನುಭವಿಸುತ್ತಿದ್ದಳು ಎಂಬ ಮಾಹಿತಿ ಸಹ ಲಭ್ಯವಾಗಿದೆ.

ಶೀಜಾನ್‌ ಸಂಪರ್ಕದ ನಂತರ ಬದಲಾಗಿದ್ದ ತುನಿಶಾ: ಇದರ ನಡುವೆ ತುನಿಶಾರ ಕುಟುಂಬಸ್ಥರು ಹೊಸ ಸಂಗತಿಗಳನ್ನು ಬಹಿರಂಗ ಪಡಿಸಿದ್ದಾರೆ. ಶೀಜಾನ್‌ ಖಾನ್​ನ ಭೇಟಿಯಾದ ನಂತರ ತುನಿಶಾ ಅನೇಕ ವಿಷಯಗಳಲ್ಲಿ ಬದಲಾಗಿದ್ದಳು. ಆಕೆ ಹಿಜಾಬ್ ಧರಿಸಲು ಸಹ ಪ್ರಾರಂಭಿಸಿದ್ದಳು ಎಂದು ಆಕೆಯ ಹತ್ತಿರದ ಸಂಬಂಧಿ ಪವನ್ ಶರ್ಮಾ ಹೇಳಿದ್ದಾರೆ. ಆರೋಪಿ ಶೀಜಾನ್ ಇತರ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು ಎಂದು ಪೊಲೀಸರು ಇಂದು ನ್ಯಾಯಾಲಯದ ಮುಂದೆ ಹೇಳಿದ್ದಾರೆ. ಹೀಗಾಗಿ ಎಲ್ಲ ಆಯಾಮಗಳಲ್ಲಿ ಈ ಪ್ರಕರಣದ ತನಿಖೆ ಮಾಡಬೇಕೆಂದೂ ಅವರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಗರ್ಭಿಣಿ ಆಗಿದ್ರಾ ಕಿರುತೆರೆ ನಟಿ ತುನಿಶಾ? ಮರಣೋತ್ತರ ವರದಿಯಲ್ಲಿ ಸಿಕ್ತು ಸ್ಪಷ್ಟನೆ

ABOUT THE AUTHOR

...view details