ತಿರುಪತಿ(ಆಂಧ್ರಪ್ರದೇಶ):ದೇಶದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾಗಿರುವ ತಿರುಪತಿ ದೇವಸ್ಥಾನ ಈಗಾಗಲೇ ರೀ ಓಪನ್ ಆಗಿದ್ದು, ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿ ಬಾಲಾಜಿ ದರ್ಶನ ಪಡೆದುಕೊಳ್ಳಬಹುದಾಗಿದೆ. ಭಕ್ತರಿಗೋಸ್ಕರ ಟಿಟಿಡಿ ಇದೀಗ ಹೊಸದೊಂದು ಆ್ಯಪ್ ವಿನ್ಯಾಸ ಮಾಡಲು ಮುಂದಾಗಿದೆ.
ದೇವಸ್ಥಾನದ ಎಲ್ಲ ಸೇವೆಗಳು ಒಂದೇ ಸ್ಥಳದಲ್ಲಿ ಸಿಗುವ ಉದ್ದೇಶದಿಂದ ಟಿಟಿಡಿ ಈ ನಿರ್ಧಾರಕ್ಕೆ ಮುಂದಾಗಿದ್ದು, ವಿಶೇಷ ಆ್ಯಪ್ ಅಭಿವೃದ್ಧಿಪಡಿಸಲು ಇದೀಗ ರಿಲಯನ್ಸ್ ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ.
ಇದಕ್ಕೆ ಸಂಬಂಧಿಸಿದಂತೆ ಟಿಟಿಡಿ ಅಧ್ಯಕ್ಷ ವೈವಿ ಸುಬ್ಬಾರೆಡ್ಡಿ, ಇಒ ಜವಾಹರ್ ರೆಡ್ಡಿ, ಹೆಚ್ಚುವರಿ ಇಒ ಧರ್ಮರೆಡ್ಡಿ ಮತ್ತು ಟಿಟಿಡಿ ಐಟಿ ಇಲಾಖೆ ಅಧಿಕಾರಿಗಳು ಇಂದು ಜಿಯೋ ಪ್ರತಿನಿಧಿಗಳನ್ನ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಇದನ್ನೂ ಓದಿರಿ:ಮಾರಾಟವಾಗ್ತಿವೆ ನಕಲಿ ಟಿಕೆಟ್.. ತಿರುಪತಿ ವೆಂಕಟೇಶ್ವರನ ದರ್ಶನಕ್ಕೆ ಬರುವ ಮುನ್ನ ಎಚ್ಚರ!
ಕಳೆದ ಕೆಲ ದಿನಗಳಿಂದ ಆನ್ಲೈನ್ನಲ್ಲಿ ಟಿಕೆಟ್ ಲಭ್ಯವಾಗುತ್ತಿದ್ದು, ಕೆಲವರು ತೊಂದರೆ ಅನುಭವಿಸುತ್ತಿದ್ದರೆ, ಇನ್ನು ಹಲವರು ನಕಲಿ ಟಿಕೆಟ್ ಬುಕ್ ಮಾಡಿ ಮೋಸ ಹೋಗಿದ್ದಾರೆ. ಈ ಸಮಸ್ಯೆ ಬಗೆಹರಿಸಲು ಜಿಯೋ ಜೊತೆ ಒಪ್ಪಂದ ಮಾಡಿಕೊಂಡಿದೆ. ವಿಶೇಷವಾದ ಆ್ಯಪ್ ವಿನ್ಯಾಸ ಮಾಡಲು ಜಿಯೋ ಒಪ್ಪಿಕೊಂಡಿದ್ದು, ಮುಂದಿನ ಕೆಲ ತಿಂಗಳಲ್ಲಿ ಆ್ಯಪ್ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಇದೆ.