ನವದೆಹಲಿ: ಇತ್ತೀಚೆಗೆ ಸಂಸತ್ತು ಅಂಗೀಕರಿಸಿದ ಹೊಸ ಹಿಟ್ ಅಂಡ್ ರನ್ ಕುರಿತ ವಿಧೇಯಕ ವಿರೋಧಿಸಿ ಭಾರಿ ವಾಹನ ನಿರ್ವಾಹಕರು ಸೋಮವಾರದಿಂದ ನಡೆಸುತ್ತಿರುವ ಮುಷ್ಕರವು ಮಂಗಳವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಅನೇಕ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯು ರಸ್ತೆಗೆ ಇಳಿಯದೇ ಇರುವುದರಿಂದ ಜನ ಜೀವನದ ಮೇಲೆ ಪರಿಣಾಮ ಬೀರಿದೆ. ಅಲ್ಲದೇ, ಮುಷ್ಕರದಿಂದಾಗಿ ಇಂಧನ ಕೊರತೆ ಉಂಟಾಗುವ ಊಹಾಪೋಹಗಳು ಹರಿದಾಡುತ್ತಿವೆ. ಹೀಗಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಸರತಿ ಸಾಲಿನಲ್ಲಿ ಜನರು ನಿಂತು ಪೆಟ್ರೋಲ್ ಹಾಗೂ ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ.
ವಸಾಹತುಶಾಹಿ ಕಾಲದ ಭಾರತೀಯ ದಂಡ ಸಂಹಿತೆ (IPC) ಕಾನೂನು ಬದಲಿಗೆ ಸಂಸತ್ತು ಇತ್ತೀಚೆಗೆ ಭಾರತೀಯ ನ್ಯಾಯ ಸಂಹಿತೆ (BNS) ಅಂಗೀಕರಿಸಿದೆ. ಇದರಲ್ಲಿನ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದ ನಿಬಂಧನೆಗಳ ವಿರುದ್ಧ ದೇಶಾದ್ಯಂತ ಬೃಹತ್ ವಾಹನ ನಿರ್ವಾಹಕರಿಂದ ಆಕ್ರೋಶ ವ್ಯಕ್ತವಾಗಿದೆ. ಹೊಸ ಕಾನೂನಿನ ಪ್ರಕಾರ, ನಿರ್ಲಕ್ಷ್ಯದ ಚಾಲನೆಯಿಂದ ಗಂಭೀರವಾದ ರಸ್ತೆ ಅಪಘಾತವನ್ನು ಉಂಟುಮಾಡುವ ಮತ್ತು ಪೊಲೀಸರಿಗೆ ಅಥವಾ ಆಡಳಿತದ ಯಾವುದೇ ಅಧಿಕಾರಿಗೆ ತಿಳಿಸದೆ ಓಡಿಹೋದ ಚಾಲಕರಿಗೆ 10 ವರ್ಷಗಳವರೆಗೆ ಶಿಕ್ಷೆ ಅಥವಾ 7 ಲಕ್ಷ ರೂ.ಗಳವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.
ಆದ್ದರಿಂದ ಬೃಹತ್ ವಾಹನ ನಿರ್ವಾಹಕರು ಜನವರಿ 1ರಿಂದ ಮೂರು ದಿನಗಳ ಮುಷ್ಕರ ನಡೆಸುತ್ತಿದ್ದಾರೆ. ಮುಷ್ಕರವು ಇಂಧನ ಪೂರೈಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಖಿಲ ಭಾರತ ಪೆಟ್ರೋಲ್ ಡೀಲರ್ಸ್ ಅಸೋಸಿಯೇಷನ್ ಹೇಳಿದೆ. ಆದರೂ, ಜನ ಜೀವನದ ಮೇಲೆ ಇದು ಪರಿಣಾಮ ಬೀರಿದೆ. 2ನೇ ದಿನವೂ ದೇಶಾದ್ಯಂತ ಮುಷ್ಕರ ಮುಂದುವರೆದ್ದು, ಪ್ರತಿಭಟನಾನಿರತರು ಹೊಸ ಕಾನೂನನ್ನು ತಕ್ಷಣವೇ ಹಿಂಪಡೆಯಬೇಕು. ಈ ಕಾನೂನಿನಿಂದ ಚಾಲಕರಿಗೆ ಕಿರುಕುಳ ಉಂಟಾಗಲಿದೆ ಎಂದು ಆರೋಪಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಮುಷ್ಕರದ ಜೋರಾಗಿದೆ. ಮುಷ್ಕರದ ಮೊದಲ ದಿನವಾದ ಸೋಮವಾರ 1.20 ಲಕ್ಷ ಹೆವಿ ವಾಹನ ನಿರ್ವಾಹಕರಲ್ಲಿ ಶೇ.70ರಷ್ಟು ನಿರ್ವಾಹಕರು ರಸ್ತೆಯಿಂದ ಹೊರಗುಳಿದಿದ್ದರು.