ಬಿಹಾರ: ವೈಶಾಲಿ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಧಾರ್ಮಿಕ ಮೆರವಣಿಗೆ ಸಾಗುತ್ತಿದ್ದಾಗ ವೇಗವಾಗಿ ಬಂದ ಟ್ರಕ್, ಚಾಲಕನ ನಿಯಂತ್ರಣ ತಪ್ಪಿ ಜನರ ಮೇಲೆಯೇ ಏಕಾಏಕಿ ನುಗ್ಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಬಿಹಾರ ಜಿಲ್ಲೆಯ ದೇಸ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂದರೆ, ರಾಜ್ಯ ರಾಜಧಾನಿಯಿಂದ ಸುಮಾರು 30 ಕಿಮೀ ದೂರದಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಧಾರ್ಮಿಕ ಮೆರವಣಿಗೆ ಮೂಲಕ ತೆರಳಿ ದೇವರಿಗೆ ಪ್ರಾರ್ಥನೆ ಸಲ್ಲಿಸಲು ರಸ್ತೆಬದಿಯ ಅರಳಿ ಮರದ ಮುಂದೆ ಜಮಾಯಿಸಿದ್ದಾಗ ಅಪಘಾತ ಸಂಭವಿಸಿದೆ.
ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, 'ಬಿಹಾರದ ವೈಶಾಲಿಯಲ್ಲಿ ನಡೆದ ಅಪಘಾತ ದುಃಖ ತಂದಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ. ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 2 ಲಕ್ಷ ರೂ ಹಾಗೂ ಗಾಯಗೊಂಡವರಿಗೆ 50,000 ರೂ. ಪರಿಹಾರ ನೀಡಲಾಗುವುದು' ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.