ಹೈದರಾಬಾದ್ (ತೆಲಂಗಾಣ): ತೆಲಂಗಾಣದ ನಿಜಾಮಾಬಾದ್‌ನ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ಹೈದರಾಬಾದ್ನ ನಿವಾಸದ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಕಾರ್ಯಕರ್ತರು ದಾಳಿ ನಡೆಸಿ, ಪೀಠೋಪಕರಣಗಳನ್ನು ಧ್ವಂಸಗೊಳಿಸಿದರು.
ಇತ್ತೀಚೆಗಷ್ಟೇ ಧರ್ಮಪುರಿ ಅರವಿಂದ್ ಅವರು, ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ವಿಧಾನ ಪರಿಷತ್ ಸದಸ್ಯೆ ಕವಿತಾ ಅವರು ಪಕ್ಷ ಬದಲಾಯಿಸಲಿದ್ದಾರೆ ಮತ್ತು ಕವಿತಾ ಬಗ್ಗೆ ಅನುಚಿತವಾದ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಟಿಆರ್ಎಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಸದರ ಮನೆಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ತೆರಳಿದ್ದರು ಎಂದು ಹೇಳಲಾಗಿದೆ.
ಇದೇ ವೇಳೆ ನಿವಾಸದ ಮೇಲೆ ದಾಳಿ ನಡೆಸಿದ ಟಿಆರ್ಎಸ್ ಕಾರ್ಯಕರ್ತರು ಕಿಟಕಿ ಗ್ಲಾಸ್, ಪೀಠೋಪಕರಣಗಳನ್ನು ಒಡೆದು ಹಾಕಿದ್ದಾರೆ. ಈ ಘಟನೆಯ ವೇಳೆ ಅರವಿಂದ್ ಅವರು ಹೈದರಾಬಾದ್ನಲ್ಲಿ ಇರಲಿಲ್ಲ. ನಿಜಾಮಾಬಾದ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಿಶಾ ಸಭೆಯಲ್ಲಿ ಭಾಗವಹಿಸಿದ್ದರು. ಘಟನೆಯ ಬಳಿಕ ಪೊಲೀಸರು ಮನೆಗೆ ಭದ್ರತೆ ಒದಗಿಸಿದ್ದಾರೆ.
ಘಟನೆಯ ಹಿನ್ನೆಲೆ ಏನು?:ಟಿಆರ್ಎಸ್ ಶಾಸಕರನ್ನು ಖರೀದಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಸಿಎಂ ಕೆಸಿಆರ್ ಈ ಹಿಂದೆ ಆರೋಪ ಮಾಡಿದ್ದರು. ಇದರ ಬೆನ್ನಲ್ಲೇ ಕವಿತಾ ಕೂಡ ಬಿಜೆಪಿಯ ಸ್ನೇಹಿತರು ನನ್ನನ್ನು ಅವರ ಪಕ್ಷಕ್ಕೆ ಬರುವಂತೆ ಆಹ್ವಾನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರದಲ್ಲಿ ಶಿವಸೇನೆಯ ಏಕನಾಥ್ ಶಿಂದೆ ಮಾದರಿಯನ್ನು ತೆಲಂಗಾಣದಲ್ಲೂ ಮಾಡೋಣ ಎಂಬುವುದಾಗಿ ಬಿಜೆಪಿಯವರು ನನ್ನೊಂದಿಗೆ ಪ್ರಸ್ತಾಪ ಮಾಡಿದ್ದಾರೆ ಎಂದು ಕವಿತಾ ದೂರಿದ್ದರು.
ಆದರೆ, ಬಿಜೆಪಿ ನಾಯಕರು ಇದನ್ನು ತಿರಸ್ಕರಿಸಿದ್ದರು. ಖುದ್ದು ಕೆಸಿಆರ್ ಬಿಜೆಪಿಗೆ ಸೇರಲು ಬಂದರೂ ಸಹ ನಾವು ಸೇರಿಸಿಕೊಳ್ಳುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ತಿರುಗೇಟು ನೀಡಿದ್ದರು. ಅಲ್ಲದೇ, ಸಂಸದ ಧರ್ಮಪುರಿ ಅರವಿಂದ್, ಕಾಂಗ್ರೆಸ್ ಸೇರಲು ಕವಿತಾ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು. ಇದು ಟಿಆರ್ಎಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಚಪ್ಪಲಿಯಲ್ಲಿ ಹೊಡೆಯುತ್ತೇನೆ-ಕವಿತಾ: ಇದರ ನಡುವೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಿತಾ, ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ವಿರುದ್ಧ ಕಟುವಾಗಿ ಟೀಕೆ ಮಾಡಿದ್ದಾರೆ. ಮತ್ತೊಮ್ಮೆ ನನ್ನ ಬಗ್ಗೆ ಹುಚ್ಚು-ಹುಚ್ಚಾಗಿ ಮಾತನಾಡಿದರೆ, ನಿಜಾಮಾಬಾದ್‌ನ ಸರ್ಕಲ್ನಲ್ಲಿ ಚಪ್ಪಲಿಯಲ್ಲಿ ಹೊಡೆಯುತ್ತೇನೆ. ಕಾಂಗ್ರೆಸ್ನ ಬೆಂಬಲದೊಂದಿಗೆ ನೀನು ಸಂಸದರಾಗಿ ಆಯ್ಕೆ ಆಗಿರೋದು ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ:ಇಂದೋರ್: ರಾಹುಲ್ ಗಾಂಧಿಗೆ ಬಾಂಬ್ ಬೆದರಿಕೆ.. ಸ್ವೀಟ್ ಅಂಗಡಿಯಲ್ಲಿ ಬೆದರಿಕೆ ಪತ್ರ ಪತ್ತೆ