ಹೈದರಾಬಾದ್ (ತೆಲಂಗಾಣ):ಟಿಆರ್ಎಸ್ ಶಾಸಕರ ಖರೀದಿ ಯತ್ನ ಆರೋಪ ಪ್ರಕರಣದ ತನಿಖೆಯನ್ನು ತೆಲಂಗಾಣದ ಎಸ್ಐಟಿ ಚುರುಕುಗೊಳಿಸಿದ್ದು, ಆರೋಪಿಗಳಲ್ಲಿ ಒಬ್ಬರಾದ ರಾಮಚಂದ್ರ ಭಾರತಿ ಅವರಿಂದ ವಿಭಿನ್ನ ಹೆಸರಿನ ಎರಡು ಪಾಸ್ಪೋರ್ಟ್ಗಳನ್ನು ಎಸ್ಐಟಿ ವಶಪಡಿಸಿಕೊಂಡಿದೆ.
ತೆಲಂಗಾಣದ ಆಡಳಿತಾರೂಢ ಶಾಸಕರ ಖರೀದಿ ಯತ್ನ ಆರೋಪದ ಮೇಲೆ ಅಕ್ಟೋಬರ್ 26ರಂದು ಹೈದರಾಬಾದ್ ಸಮೀಪದ ಮೊಯಿನಾಬಾದ್ನಲ್ಲಿರುವ ಫಾರ್ಮ್ಹೌಸ್ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದರು. ಟಿಆರ್ಎಸ್ ಪಕ್ಷ ಬಿಡಲು ಬಿಜೆಪಿಯಿಂದ 100 ಕೋಟಿ ರೂ ಹಾಗೂ ಗುತ್ತಿಗೆ ಆಮಿಷವೊಡ್ಡಲಾಗಿದೆ ಎಂದು ಶಾಸಕರು ಆರೋಪಿಸಿದ್ದರು. ಈ ಪ್ರಕರಣದ ಏಜೆಂಟ್ಗಳು ಎನ್ನಲಾದ ಆರೋಪಿಗಳಲ್ಲಿ ರಾಮಚಂದ್ರ ಭಾರತಿ ಒಬ್ಬರಾಗಿದ್ದಾರೆ.
ಇದನ್ನೂ ಓದಿ:ತೆಲಂಗಾಣದೊಂದಿಗೆ ದೆಹಲಿ, ಆಂಧ್ರ ಸರ್ಕಾರಗಳನ್ನೂ ಉರುಳಿಸಲು ಪಿತೂರಿ: ಬಿಜೆಪಿ ವಿರುದ್ಧ ಕೆಸಿಆರ್ ಆರೋಪ
ಇದೀಗ ರಾಮಚಂದ್ರ ಭಾರತಿ ಬಳಿ ಎರಡು ಪಾಸ್ಪೋರ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಐಟಿ ತಿಳಿಸಿದ್ದು, ಎರಡನೇ ಪಾಸ್ಪೋರ್ಟ್ ಅನ್ನು ನಕಲಿ ಮೂಲಕ ಪಡೆಯಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ. ತನಿಖಾಧಿಕಾರಿಗಳ ಮಾಹಿತಿ ಪ್ರಕಾರ, ರಾಮಚಂದ್ರ ಭಾರತಿ ಅವರಿಂದ ವಶಪಡಿಸಿಕೊಂಡ ಲ್ಯಾಪ್ಟಾಪ್ ಮತ್ತು ಎರಡು ಸೆಲ್ ಫೋನ್ಗಳ ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ, ಅವರು ಎರಡು ವಿಭಿನ್ನ ಪಾಸ್ಪೋರ್ಟ್ಗಳನ್ನು ಹೊಂದಿರುವುದು ಕಂಡುಬಂದಿದೆ.
ಎರಡೂ ಪಾಸ್ಪೋರ್ಸ್ಗಳಲ್ಲಿ ಕರ್ನಾಟಕದ ವಿಳಾಸ: ಮತ್ತೊಂದು ಅಚ್ಚರಿ ಎಂದರೆ ರಾಮಚಂದ್ರ ಭಾರತಿ ಪತ್ತೆಯಾಗಿರುವ ಎರಡೂ ವಿಭಿನ್ನ ಪಾಸ್ಕೋರ್ಟ್ಗಳಲ್ಲಿ ಕರ್ನಾಟಕ ವಿಳಾಸವಿದೆ. ಒಂದು ಪಾಸ್ಪೋರ್ಟ್ ಸ್ವಾಮೀಜಿ ಶ್ರೀರಾಮಚಂದ್ರ ಅವರ ಹೆಸರಿನಲ್ಲಿದ್ದು, ಇದರಲ್ಲಿ ತಂದೆ ಹೆಸರು ಮಹಾಸ್ವಾಮಿ ಶ್ರೀಮಧ್ವ ಧರ್ಮದತ್ತ ಹಾಗೂ ಜನ್ಮ ದಿನಾಂಕ 1979ರ ಫೆಬ್ರವರಿ 12 ಮತ್ತು ನಿವಾಸವು ಪುತ್ತೂರು, ಕರ್ನಾಟಕ ಎಂದು ನಮೂದಿಸಲಾಗಿದೆ. ಈ ಪಾಸ್ಪೋರ್ಟ್ಅನ್ನು 2019ರ ನವೆಂಬರ್ 8ರಂದು ನೀಡಲಾಗಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.