ಹೈದರಾಬಾದ್ (ತೆಲಂಗಾಣ):ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ನಾಲ್ವರು ಶಾಸಕರಿಗೆ ಹಣದ ಅಮಿಷವೊಡ್ಡಿ ಖರೀದಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಸಿದಂತೆ ಎಸಿಬಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಆರೋಪಿಗಳ ರಿಮ್ಯಾಂಡ್ಗೆ ನಿರಾಕರಿಸಿದ್ದರು. ಎಸಿಬಿ ವಿಶೇಷ ನ್ಯಾಯಾಲಯ ರಿಮ್ಯಾಂಡ್ ನಿರಾಕರಿಸಿದ್ದನ್ನು ಪ್ರಶ್ನಿಸಿ ಸೈಬರಾಬಾದ್ ಪೊಲೀಸರು ತೆಲಂಗಾಣ ಹೈಕೋರ್ಟ್‌ಗೆ ಮೊರೆ ಹೋಗಿದ್ದಾರೆ.
ಬುಧವಾರ ರಾತ್ರಿ, ಹೈದರಾಬಾದ್‌ನ ಹೊರವಲಯದಲ್ಲಿರುವ ಫಾರ್ಮ್‌ಹೌಸ್‌ನಿಂದ ರಾಮಚಂದ್ರ ಭಾರತಿ, ನಂದ ಕುಮಾರ್ ಮತ್ತು ಸಿಂಹಯಾಜಿ ಸ್ವಾಮಿಯನ್ನು ಅಕ್ರಮ ಹಣದೊಂದಿಗೆ ಬಂಧಿಸಲಾಗಿತ್ತು. ನವೆಂಬರ್ 3 ರಂದು ಮುನುಗೋಡು ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೂ ಮುನ್ನ ಮೂವರು ಟಿಆರ್‌ಎಸ್ ಶಾಸಕರನ್ನು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಆರೋಪ ಇದೆ.