ಅಮರಾವತಿ (ಆಂಧ್ರಪ್ರದೇಶ): ಈಗಾಗಲೇ ರಾಜಧಾನಿ ವಿಚಾರದಲ್ಲಿ ಆಂಧ್ರಪ್ರದೇಶದಲ್ಲಿ ನಡೆಯುತ್ತಿದ್ದ ವಿವಾದಕ್ಕೆ ಅಲ್ಲಿನ ಹೈಕೋರ್ಟ್ ಅಂತ್ಯ ಹಾಡಿದೆ. ಅಮರಾವತಿಯೇ ಆಂಧ್ರಪ್ರದೇಶದ ರಾಜಧಾನಿಯಾಗಿರಲಿದೆ ಎಂದು ತೀರ್ಪು ನೀಡಿದ್ದು, ಒಂದು ರಾಜ್ಯಕ್ಕೆ ಮೂರು ರಾಜಧಾನಿಗಳಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಆಂಧ್ರ ಹೈಕೋರ್ಟ್ನ ಈ ತೀರ್ಪಿನ ಹಿಂದೆ ಅತಿ ದೊಡ್ಡ ರೈತ ಪ್ರತಿಭಟನೆಗಳಿವೆ. ಮೂರು ರಾಜಧಾನಿ ಎಂದು ಆಂಧ್ರ ಸರ್ಕಾರ ಘೋಷಣೆ ಮಾಡುತ್ತಿದ್ದಂತೆ ಆರಂಭವಾದ ರೈತ ಹೋರಾಟ ಗೆಲುವು ಸಾಧಿಸಿದೆ. ಸುಮಾರು 807 ದಿನಗಳ ನಂತರ ಸಿಕ್ಕ ಗೆಲುವಿಗೆ ರೈತರು ಅನುಭವಿಸಿದ ಕಷ್ಟಗಳು ಅಷ್ಟಿಷ್ಟಲ್ಲ.
ಎರಡು ವರ್ಷ ಮೂರು ತಿಂಗಳು ನಡೆದ ಈ ಪ್ರತಿಭಟನೆ ವೇಳೆ ಆಂಧ್ರ ಸರ್ಕಾರ ದಾಖಲಿಸಿದ್ದು ಬರೋಬ್ಬರಿ 3,852 ಪ್ರಕರಣಗಳು. ಇದರಲ್ಲಿ ರೈತರನ್ನು ಮಾತ್ರವಲ್ಲದೇ ಮಹಿಳೆಯರು, ದಲಿತರು, ವೃದ್ಧರನ್ನು ಆರೋಪಿಗಳನ್ನಾಗಿ ಗುರುತಿಸಲಾಗಿದೆ.