ನವದೆಹಲಿ:ಮೂರುಈಶಾನ್ಯ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು ತ್ರಿಪುರಾ ಮತ್ತು ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಪಡೆಯಲಿದೆ. ಇತ್ತೀಚೆಗಿನ ಮಾಹಿತಿಯಂತೆ ತ್ರಿಪುರಾದಲ್ಲಿ 32, ನಾಗಾಲ್ಯಾಂಡ್‌ನಲ್ಲಿ 36 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದು, ಮೇಘಾಲಯದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ) 27 ಸ್ಥಾನಗಳಲ್ಲಿ ಮುಂದಿದೆ.
ಮೇಘಾಲಯ ಅತಂತ್ರ?: ತ್ರಿಪುರಾದಲ್ಲಿ ಬಿಜೆಪಿ ಸ್ವಶಕ್ತಿಯ ಮೇಲೆ ಆಡಳಿತಕ್ಕೆ ಬರಲಿದೆ. ನಾಗಾಲ್ಯಾಂಡ್‌ನಲ್ಲಿ ಮೈತ್ರಿ ಸರ್ಕಾರದೊಂದಿಗೆ ಅಧಿಕಾರ ಹಿಡಿಯಲಿದೆ. ಮೇಘಾಲಯದಲ್ಲಿ ಮಾತ್ರ ಕಮಲ ಪಾಳಯದ ಆಟ ನಡೆದಿಲ್ಲ. ಇಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಮುಂದಿದ್ದರೂ ಅತಂತ್ರ ವಿಧಾನಸಭೆಯ ಲಕ್ಷಣ ಗೋಚರಿಸುತ್ತಿದೆ.
ತ್ರಿಪುರಾ ವಿಧಾನಸಭೆಗೆ ಫೆಬ್ರವರಿ 16 ರಂದು ಚುನಾವಣೆಗೆ ನಡೆದರೆ, ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿ ಫೆಬ್ರವರಿ 27 ರಂದು ಮತ ಚಲಾವಣೆ ನಡೆದಿತ್ತು. ಮೂರು ವಿಧಾನಸಭೆಗಳ ತಲಾ 60 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆದಿದೆ. ಇದು ರಾಜಕೀಯ ಪಕ್ಷಗಳಿಗೆ 2024 ರ ಲೋಕಸಭಾ ಚುನಾವಣೆಗೆ ದೊಡ್ಡ ವೇದಿಕೆ ಒದಗಿಸಿಕೊಡಲಿದೆ ಎಂದೇ ವಿಶ್ಲೇಷಿಸಲಾಗಿದೆ.
ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್‌ಗಳಲ್ಲಿ ಕ್ರಮವಾಗಿ ಶೇ.87.76, ಶೇ.85.27 ಮತ್ತು ಶೇ.85.90 ರಷ್ಟು ಉತ್ತಮ ಮತದಾನವಾಗಿದೆ. ಈ ರಾಜ್ಯಗಳಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ಮಧ್ಯೆ ತುರುಸಿನ ಪೈಪೋಟಿ ಇದೆ.
ಎಕ್ಸಿಟ್ ಪೋಲ್ ಭವಿಷ್ಯವೇನು?:ತ್ರಿಪುರಾದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಸರ್ಕಾರವನ್ನು ರಚಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳಿವೆ. ಪ್ರೇಮ್ ಕುಮಾರ್ ರಿಯಾಂಗ್ ಅವರ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ 55 ಸ್ಥಾನಗಳಲ್ಲಿ ಸ್ಪರ್ಧಿಸಿದ್ದರೆ, ಉಳಿದ 5 ಸ್ಥಾನಗಳಲ್ಲಿ ಐಪಿಎಫ್‌ಟಿ ಇದೆ. ನಿರ್ಗಮನ ಸಮೀಕ್ಷೆಗಳ ಪ್ರಕಾರ, ಬಿಜೆಪಿ 29 ರಿಂದ 40 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಯಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು 6 ರಿಂದ 11 ಸ್ಥಾನ, ಟಿಎಂಪಿ 9 ರಿಂದ 17 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.
ಮೇಘಾಲಯ ಅತಂತ್ರ:ಸಮೀಕ್ಷೆಗಳ ಪ್ರಕಾರ, ರಾಜ್ಯದಲ್ಲಿ ಅತಂತ್ರ ಫಲಿತಾಂಶ ಬರಲಿದೆ ಎಂದು ಅಂದಾಜಿಸಲಾಗಿದೆ. ಸಿಎಂ ಕಾನ್ರಾಡ್ ಸಂಗ್ಮಾ ಅವರ ಎನ್‌ಪಿಪಿ ಮೇಘಾಲಯದಲ್ಲಿ ಅತಿಹೆಚ್ಚು ಸ್ಥಾನ ಗೆದ್ದರೂ ಬಹುಮತ ಪಡೆಯುವುದಿಲ್ಲ. 18 ರಿಂದ 26 ಸ್ಥಾನ ಸಿಗಲಿದೆ. ಬಿಜೆಪಿ ಮತ್ತು ಕಾಂಗ್ರೆಸ್ 6 ರಿಂದ 12 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಇನ್ನೊಂದು ಮಾಧ್ಯಮ ಸಮೀಕ್ಷೆಯ ಪ್ರಕಾರ ಎನ್‌ಪಿಪಿ 18-24, ತೃಣಮೂಲ ಕಾಂಗ್ರೆಸ್ 5-9, ಬಿಜೆಪಿ 4-8, ಕಾಂಗ್ರೆಸ್ 6-12 ಮತ್ತು ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ 8-12 ಸ್ಥಾನಗಳನ್ನು ಪಡೆಯಲಿದೆ ಎಂದು ಊಹಿಸಲಾಗಿದೆ.
ಬಿಜೆಪಿ ತೆಕ್ಕೆಗೆ ನಾಗಾಲ್ಯಾಂಡ್:ಬಿಜೆಪಿ-ಎನ್‌ಡಿಪಿಪಿ ಮೈತ್ರಿ ಎರಡನೇ ಅವಧಿಗೆ ಸರ್ಕಾರ ಮುನ್ನಡೆಸಲಿದೆ. 60 ಅಸೆಂಬ್ಲಿ ಸ್ಥಾನಗಳಲ್ಲಿ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ 38-48 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಉಳಿಸಿಕೊಳ್ಳಲಿದೆ. ನಾಗಾ ಪೀಪಲ್ಸ್ ಫ್ರಂಟ್ 3-8 ಸ್ಥಾನ, ಕಾಂಗ್ರೆಸ್ 1-2 ಸ್ಥಾನ, ಇತರರು 5-15 ಸ್ಥಾನಗಳನ್ನು ಗಳಿಸಬಹುದು ಎಂದು ಎಕ್ಸಿಟ್ ಪೋಲ್ ಅಂದಾಜಿಸಿದೆ.
ಉಪ ಚುನಾವಣೆಯ ಫಲಿತಾಂಶ: ಮೂರು ರಾಜ್ಯಗಳ ವಿಧಾನಸಭೆ ಚುನಾವಣೆಯ ಮತಎಣಿಕೆಯ ಜೊತೆಗೆ 5 ರಾಜ್ಯಗಳ 6 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿದ್ದು, ಮತ ಎಣಿಕೆ ನಡೆಯುತ್ತಿದೆ. ಅರುಣಾಚಲ ಪ್ರದೇಶದ ಲುಮ್ಲಾ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಜಾರ್ಖಂಡ್ನ ರಾಮಗಢ ಕ್ಷೇತ್ರದಲ್ಲಿ ಎಜೆಎಸ್ಯು ಪಕ್ಷ ಮುನ್ನಡೆಯಲ್ಲಿದೆ. ತಮಿಳುನಾಡಿನ ಪೂರ್ವ ಈರೋಡ್ನಲ್ಲಿ ಕಾಂಗ್ರೆಸ್ ಮುಂದಿದೆ. ಮಹಾರಾಷ್ಟ್ರದ 2 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ನಡೆಸುತ್ತಿವೆ. ಪಶ್ಚಿಮಬಂಗಾಳದ ಚಿಂಚ್‌ವಾಡ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಂದೆ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಇದನ್ನೂ ಓದಿ:ಇಂದು ಮೂರು ಈಶಾನ್ಯ ರಾಜ್ಯಗಳ ಫಲಿತಾಂಶ: ಮತ ಎಣಿಕೆಗೆ ಎಲ್ಲ ಸಿದ್ಧತೆ ಪೂರ್ಣ, ಪೊಲೀಸ್ ಬಿಗಿ ಭದ್ರತೆ