ಅಗರ್ತಲಾ ( ತ್ರಿಪುರ ) :ನಿವೃತ್ತ ನಾಗರಿಕ ಸೇವಾ ಅಧಿಕಾರಿ, ಮಾನವತಾವಾದಿ ಹಾಗೂ ತ್ರಿಪುರಾದ ಮೊದಲ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಹಿಮಾಂಶು ಮೋಹನ್ ಚೌಧರಿ ಮಂಗಳವಾರ ಅಗರ್ತಲಾದ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ ಕಾಯಿಲೆಗಳಿಂದ ನಿಧನರಾಗಿದ್ದಾರೆ. 84 ವರ್ಷ ವಯಸ್ಸಿನವರಾಗಿದ್ದ ಚೌಧರಿ ಅವರು ಇಬ್ಬರು ಪುತ್ರಿಯರು, ಸಂಬಂಧಿಕರು ಮತ್ತು ಅಪಾರ ಸಂಖ್ಯೆಯ ಹಿತೈಷಿಗಳನ್ನು ಬಿಟ್ಟು ಅಗಲಿದ್ದಾರೆ. ಅವರ ಪತ್ನಿ ನಾಲ್ಕು ವರ್ಷಗಳ ಹಿಂದೆಯೇ ಮೃತಪಟ್ಟಿದ್ದರು.
ಬಾಂಗ್ಲಾದೇಶದಲ್ಲಿ ವಿಮೋಚನಾ ಯುದ್ಧ ಪ್ರಾರಂಭವಾದಾಗ ಹಿಮಾಂಶು ಅವರು ತ್ರಿಪುರಾದ ಸಿಪಹಿಜಾಲಾ ಜಿಲ್ಲೆಯ ಸೋನಮುರಾ ಉಪವಿಭಾಗದ ಉಪವಿಭಾಗಾಧಿಕಾರಿ (ಎಸ್ ಡಿ ಒ ) ಆಗಿದ್ದರು. ಈ ವೇಳೆ ಅವರು 2.5 ಲಕ್ಷ ಬಾಂಗ್ಲಾದೇಶೀಯರಿಗೆ ಸಹಾಯ ಹಸ್ತವನ್ನು ಚಾಚಿದ್ದರು. ನಿರಾಶ್ರಿತರಿಗೆ ಟೆಂಟ್‌ಗಳು ಮತ್ತು ತಾತ್ಕಾಲಿಕ ಅಡುಗೆ ಮನೆಗಳನ್ನು ಸ್ಥಾಪಿಸುವ ಮೂಲಕ ಆಹಾರ ಮತ್ತು ಆಶ್ರಯವನ್ನು ಒದಗಿಸುವಲ್ಲಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ :ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಹೋರಾಡಿದ್ದ ಕನ್ನಡದ ಕುವರ.. ವೀರ ಪುತ್ರನಿಗೆ ನಮಿಸಿದ ಬಾಂಗ್ಲಾ ಸರ್ಕಾರ
ಹಿಮಾಂಶು ಮೋಹನ್ ಚೌಧರಿ ಅವರು ತ್ರಿಪುರಾದ ರಾಜಧಾನಿ ಅಗರ್ತಲಾದಲ್ಲಿ ನೆಲೆಸಿದ್ದರು. ಅವರ ತಂದೆ ಸೊರೋಶಿ ಮೋಹನ್ ಚೌಧರಿ ಅಗರ್ತಲಾದಲ್ಲಿ ಪ್ರತಿಷ್ಠಿತ ವೈದ್ಯರಾಗಿದ್ದರು. ಚೌಧರಿ ಅವರು ಬ್ರಾಹ್ಮಣ ಮೂಲದ ಪೂರ್ವ ಬಂಗಾಳಿ ಪರಂಪರೆಯ ಅವಿಭಕ್ತ ಕುಟುಂಬದಲ್ಲಿ ಬೆಳೆದವರು. 1972 ರಲ್ಲಿ ಕೇಂದ್ರ ಸರ್ಕಾರವು ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನೀಡಿ ಗೌರವಿಸಿತು. ಹಾಗೆಯೇ ಬಾಂಗ್ಲಾದೇಶ ಸರ್ಕಾರವು ಅವರ ಕೊಡುಗೆಯನ್ನು ಶ್ಲಾಘಿಸಿ 2013 ರಲ್ಲಿ 'ಫ್ರೆಂಡ್ ಆಫ್ ಬಾಂಗ್ಲಾದೇಶ' ಪದಕವನ್ನು ನೀಡಿ ಗೌರವಿಸಿದೆ.