ಅಗರ್ತಲಾ: ತ್ರಿಪುರಾ ವಿಧಾನಸಭಾ ಚುನಾವಣೆಯ ಮತದಾನ ಅಂತ್ಯಗೊಂಡಿದ್ದು ಸಂಜೆ 5 ಗಂಟೆಯವರೆಗೆ ಶೇ 75ರಷ್ಟು ಮತದಾನವಾಗಿದೆ. ಚುನಾವಣಾ ಆಯೋಗದ ಪ್ರಕಾರ ಸಂಜೆ 5 ಗಂಟೆಯವರೆಗೆ ಶೇ 75.73 ರಷ್ಟು ಮತದಾನವಾಗಿದೆ. ಈಶಾನ್ಯ ರಾಜ್ಯ ತ್ರಿಪುರಾದಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ದಕ್ಷಿಣ ತ್ರಿಪುರಾ ಜಿಲ್ಲೆಯ ಶಾಂತಿರ್‌ಬಜಾರ್ ವಿಧಾನಸಭಾ ಕ್ಷೇತ್ರದ ಕಲಾಚೆರಾ ಮತಗಟ್ಟೆಯ ಹೊರಗೆ ಆಡಳಿತಾರೂಢ ಬಿಜೆಪಿ ಮತ್ತು ಸಿಪಿಐ ಕಾರ್ಯಕರ್ತರ ನಡುವಿನ ಘರ್ಷಣೆಯಲ್ಲಿ ವ್ಯಕ್ತಿಯೊಬ್ಬರ ಕಾಲಿಗೆ ಗಾಯವಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ನಮ್ಮ ಅಧಿಕಾರಿಗಳು ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ತ್ರಿಪುರದ ಸಿಇಒ ಕಿರಣ್ ಗಿಟ್ಟೆ ಟ್ವೀಟ್ ಮಾಡಿದ್ದಾರೆ. ಘಟನೆಯ ಬಗ್ಗೆ ಶಾಂತಿರ್‌ಬಜಾರ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅವರು ಹೇಳಿದರು. ತನ್ನ ಮೇಲೆ ದಾಳಿ ನಡೆಸಿದ್ದು ಯಾರು ಎಂಬುದನ್ನು ಗಾಯಗೊಂಡ ಸಿಪಿಐ ಕಾರ್ಯಕರ್ತನಿಗೆ ಗೊತ್ತಾಗಿಲ್ಲ. ಗುರುವಾರ ಬೆಳಗ್ಗೆ 7 ಗಂಟೆಗೆ 60 ಸ್ಥಾನಗಳ ತ್ರಿಪುರಾ ರಾಜ್ಯ ವಿಧಾನಸಭೆಯಲ್ಲಿ 3357 ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿತ್ತು. ಮೇಘಾಲಯ ಮತ್ತು ನಾಗಾಲ್ಯಾಂಡ್ ಗಳ ವಿಧಾನಸಭಾ ಚುನಾವಣೆಗೆ ಮತದಾನ ಫೆಬ್ರವರಿ 27 ರಂದು ನಡೆಯಲಿದೆ. ಎಲ್ಲಾ ಮೂರು ರಾಜ್ಯಗಳ ಮತ ಎಣಿಕೆ ಮಾರ್ಚ್ 2 ರಂದು ನಡೆಯಲಿದೆ.
ಬೆಳಗ್ಗೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ರಾಜಕೀಯ ಪಕ್ಷಗಳ ಬೂತ್ ಏಜೆಂಟ್‌ಗಳು ಅಣಕು ಮತದಾನದ ಮೂಲಕ ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದ ನಂತರ ಮತದಾನ ಪ್ರಾರಂಭವಾಯಿತು. ಮತಗಟ್ಟೆಯ ಹೊರಗಿನ ಜನಸಂದಣಿ ನಿಯಂತ್ರಣದ ಜವಾಬ್ದಾರಿಯನ್ನು ಸ್ಥಳೀಯ ಪೊಲೀಸರಿಗೆ ಹಾಗೂ ಮತಗಟ್ಟೆಗಳಲ್ಲಿನ ಮತದಾರರನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಭದ್ರತಾ ಸಿಬ್ಬಂದಿಗೆ ವಹಿಸಲಾಗಿತ್ತು.
ತ್ರಿಪುರಾ ಜನರು ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದರು. ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ ಮತ್ತು ಪ್ರಜಾಪ್ರಭುತ್ವದ ಹಬ್ಬವನ್ನು ಬಲಪಡಿಸುವಂತೆ ತ್ರಿಪುರಾದ ಜನತೆಗೆ ಒತ್ತಾಯಿಸುತ್ತಿದ್ದೇನೆ. ಯುವಕರು ತಮ್ಮ ಹಕ್ಕು ಚಲಾಯಿಸುವಂತೆ ನಾನು ವಿಶೇಷವಾಗಿ ಕರೆ ನೀಡುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.