ಪಾಟ್ನಾ(ಬಿಹಾರ): ಮಗಳು ಹಾಗೂ ವಿಚ್ಛೇದಿತ ಪತ್ನಿಗೆ ಗುಂಡಿಕ್ಕಿರುವ ವ್ಯಕ್ತಿಯೊಬ್ಬ ತದನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆಯಿತು. ಘಟನೆಯ ಸಂಪೂರ್ಣ ದೃಶ್ಯಾವಳಿ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ವಿಚ್ಛೇದಿತ ಪತ್ನಿ ಹಾಗೂ ಮಗಳ ಮೇಲೆ ಗುಂಡು ಹಾರಿಸಿರುವ ಆರೋಪಿ, ತದನಂತರ ತಾನೂ ಗುಂಡು ಹಾರಿಸಿಕೊಂಡ.
ವಿಚ್ಛೇದಿತ ಪತ್ನಿ, ಪುತ್ರಿಗೆ ಗುಂಡಿಕ್ಕಿ ವ್ಯಕ್ತಿ ಆತ್ಮಹತ್ಯೆ! 13 ಸೆಕೆಂಡ್‌ನಲ್ಲಿ ಮೂವರ ಕೊಲೆ! ಪಾಟ್ನಾದ ಗಾರ್ಡ್ನಿಬಾಗ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಕ್ಟರ್ ಎ ಬಳಿ ಈ ಘಟನೆ ನಡೆದಿದೆ. ನಡುರಸ್ತೆಯಲ್ಲೇ ರಾಜೀವ್ ಎಂಬಾತ ಮೊದಲು ತನ್ನ ಮಗಳ ಹಣೆಗೆ ಗುಂಡು ಹಾರಿಸಿದ್ದಾನೆ. ಆ ಬಳಿಕ ವಿಚ್ಛೇದಿತ ಪತ್ನಿ ಪ್ರಿಯಾಂಕಾಗೂ ಗುಂಡು ಹಾರಿಸಿದ. ತದನಂತರ, ತಾನೂ ಗುಂಡು ಹಾರಿಸಿಕೊಂಡಿದ್ದು ಏಕಕಾಲದಲ್ಲಿ ಮೂರು ಸಾವು ಸಂಭವಿಸಿತು. ಘಟನಾ ಸ್ಥಳಕ್ಕೆ ಎಸ್ಎಸ್ಪಿ ಭೇಟಿ ನೀಡಿದ್ದು, ತನಿಖೆ ಆರಂಭಿಸಿದ್ದಾರೆ.
ಪ್ರಕರಣದ ವಿವರ:ಆರೋಪಿ ರಾಜೀವ್ ಕುಮಾರ್ ಕಳೆದ ಕೆಲವು ವರ್ಷಗಳ ಹಿಂದೆ ಪ್ರಿಯಾಂಕಾಳ ಸಹೋದರಿಯನ್ನು ಮದುವೆ ಮಾಡಿಕೊಂಡಿದ್ದಾನೆ. ಆಕೆಗೆ ಹೆಣ್ಣು ಮಗುವಿದೆ. ಇದಾದ ಬಳಿಕ ಆಕೆ ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಮೊದಲ ಹೆಂಡತಿಯ ಸಹೋದರಿ ಪ್ರಿಯಾಂಕಾ ಜೊತೆ ರಾಜೀವ್ ಮದುವೆ ಮಾಡಿಕೊಂಡಿದ್ದನು. ವರ್ಷಗಳ ಕಾಲ ಇವರ ನಡುವೆ ಯಾವುದೇ ರೀತಿಯ ಸಮಸ್ಯೆ ಉಂಟಾಗಿರಲಿಲ್ಲ. ಆದರೆ, ಕೆಲ ತಿಂಗಳಿಂದ ಇಬ್ಬರ ವೈವಾಹಿಕ ಜೀವನದಲ್ಲಿ ವೈಮನಸ್ಸು ಉಂಟಾಗಿದ್ದು ಪರಸ್ಪರ ಒಪ್ಪಿಕೊಂಡು ವಿಚ್ಛೇದನ ಪಡೆದಿದ್ದರು.
ಈ ಮಧ್ಯೆ ಪ್ರಿಯಾಂಕಾ ಏರ್ ಫೋರ್ಸ್ ಅಧಿಕಾರಿ ಸತೀಶ್ ಎಂಬವರ ಜೊತೆ ಎರಡನೇ ಮದುವೆ ಮಾಡಿಕೊಂಡಿದ್ದರು. ಮೊದಲ ಹೆಂಡತಿಗೆ ಹುಟ್ಟಿದ ಹೆಣ್ಣು ಮಗುವನ್ನು ಪ್ರಿಯಾಂಕಾ ನೋಡಿಕೊಳ್ಳುತ್ತಿದ್ದರು. ಈ ವಿಷಯ ರಾಜೀವ್ ಕೋಪಕ್ಕೆ ಕಾರಣವಾಗಿತ್ತು. ಪ್ರಿಯಾಂಕಾ ಹಾಗೂ ಮಗಳು ಹೊರಗಡೆ ಹೋಗುತ್ತಿದ್ದ ವೇಳೆ ರಸ್ತೆಯಲ್ಲಿ ಅವರನ್ನು ಅಡ್ಡಗಟ್ಟಿರುವ ರಾಜೀವ್ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಇದರ ಬೆನ್ನಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.