ಖೇಜೂರಿ (ಪಶ್ಚಿಮ ಬಂಗಾಳ) : ಇಲ್ಲಿನ ಪೂರ್ವ ಮಿಡ್ನಾಪುರದಲ್ಲಿ ವೈದ್ಯರೂ ಆಗಿರುವ ಟಿಎಂಸಿ ಕಾರ್ಯಕರ್ತನೊಬ್ಬರನ್ನು ಬಿಜೆಪಿ ಕಾರ್ಯಕರ್ತರು ಪೆಟ್ರೋಲ್ ಸುರಿದು ಥಳಿಸಿದ ಘಟನೆ ಭಾನುವಾರ ನಡೆದಿದೆ. ಗಂಭೀರ ಸುಟ್ಟ ಗಾಯಗಳಾಗಿರುವ ತೃಣಮೂಲ ಕಾರ್ಯಕರ್ತನನ್ನು ಕಂಠಿ ಉಪ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ತೃಣಮೂಲ ವಕ್ತಾರ ಕುನಾಲ್ ಘೋಷ್ ಟ್ವೀಟ್ ಮೂಲಕ ಆರೋಪಿಗಳನ್ನು ಶೀಘ್ರವೇ ಬಂಧಿಸುವಂತೆ ಆಗ್ರಹಿಸಿದ್ದಾರೆ. ಜಿಲ್ಲಾ ಬಿಜೆಪಿ ಘಟಕ ಈ ಆರೋಪಗಳನ್ನು ಅಲ್ಲಗಳೆದಿದೆ.
ಸಂತ್ರಸ್ತ ತೃಣಮೂಲ ಕಾರ್ಯಕರ್ತನ ಹೆಸರು ನರೇಂದ್ರನಾಥ್ ಮಾಝಿ. ಪೂರ್ವ ಮಿಡ್ನಾಪುರದ ಖೆಜುರಿಯ ಉತ್ತರ ಕಲಾಮ್ದನ್ ಪ್ರದೇಶದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಪಂಚಾಯತ್ ಚುನಾವಣೆ ಮತ್ತು ಫಲಿತಾಂಶದ ನಂತರವೂ ರಾಜ್ಯದಲ್ಲಿ ಹಿಂಸಾಚಾರ ಮುಂದುವರೆದಿದೆ.
ಇದೀಗ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಬಿಜೆಪಿ ತೃಣಮೂಲ ಕಾರ್ಯಕರ್ತರ ಮೇಲೆ ಪೆಟ್ರೋಲ್ ಸುರಿದ ಆರೋಪ ಕೇಳಿಬಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ಬಿಜೆಪಿ ಬೆಂಬಲಿತ ದುಷ್ಕರ್ಮಿಗಳು ಬಲವಂತವಾಗಿ ಕೃಷಿ ಭೂಮಿಯನ್ನು ಆಕ್ರಮಿಸಲು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ತೃಣಮೂಲ ಕಾರ್ಯಕರ್ತ ನರೇಂದ್ರನಾಥ್ ಮಾಝಿ ಮಧ್ಯಪ್ರವೇಶಿಸಿದರು. ಆ ನಂತರ, ವೃತ್ತಿಯಲ್ಲಿ ವೈದ್ಯರಾಗಿರುವ ತೃಣಮೂಲ ಕಾರ್ಯಕರ್ತನನ್ನ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ತೀವ್ರವಾಗಿ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜತೆಗೆ ಅವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಖೇಜೂರಿ ಪೊಲೀಸ್ ಠಾಣಾಧಿಕಾರಿ ಅಮಿತ್ ಡೇ ಮಾತನಾಡಿ, ಈ ಘಟನೆಯಲ್ಲಿ ಇದುವರೆಗೆ ಪೊಲೀಸರಿಗೆ ಯಾವುದೇ ಲಿಖಿತ ದೂರು ದಾಖಲಾಗಿಲ್ಲ. ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ನರೇಂದ್ರನಾಥ್ ಮಾಝಿ ಮೇಲೆ ದುಷ್ಕರ್ಮಿಗಳು ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ ನಂತರ ದೇಹದ ಮೇಲ್ಭಾಗ ಸುಟ್ಟಿದೆ. ಸ್ಥಳೀಯರು ಆತನನ್ನು ರಕ್ಷಿಸಿ ಖೇಜೂರಿ ಬ್ಲಾಕ್ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಸ್ಥಿತಿ ಹದಗೆಟ್ಟಾಗ ಅವರನ್ನು ಕಂಠಿ ಉಪಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.