ಷಹಜಹಾನ್‌ಪುರ(ಉತ್ತರಪ್ರದೇಶ) :ಹಾವು ಕಚ್ಚಿದ ತಕ್ಷಣವೇ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಅದು ಬಿಟ್ಟು ಮಾಂತ್ರಿಕನ ಬಳಿಗೆ ಕರೆದೊಯ್ದರೆ ಜೀವ ಉಳಿಯುವುದಿಲ್ಲ. ಉತ್ತರಪ್ರದೇಶದ ಗ್ರಾಮವೊಂದರಲ್ಲಿ ಹೀಗೆ ಮಾಡಿ ಮೂಢನಂಬಿಕೆಗೆ ಪ್ರಾಣವೊಂದು ಹಾರಿ ಹೋಗಿದೆ.
ಶಹಜಹಾನ್ಪುರ ಜಿಲ್ಲೆಯ ರಾವತ್‌ಪುರ ಗ್ರಾಮದಲ್ಲಿ 3 ದಿನಗಳ ಹಿಂದೆ ಘಟನೆ ನಡೆದಿದೆ. ಬಾಲಕಿಗೆ ಹಾವು ಕಚ್ಚಿದೆ. ಈ ವೇಳೆ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಬದಲು ಊರ ಮಾಂತ್ರಿಕನ ಬಳಿಗೆ ಕರೆದೊಯ್ದಿದ್ದಾರೆ. ಮಗು ವಿಷದಿಂದ ಸಾವನ್ನಪ್ಪಿದೆ. ಮಾಂತ್ರಿಕ ಬಾಲಕಿ ಬದುಕಿದ್ದಾಳೆ ಎಂದು ಹೇಳಿ ದೇಹವನ್ನು ಸಗಣಿ, ಬೇವಿನ ಸೊಪ್ಪಿನಿಂದ ಮುಚ್ಚಿಸಿದ್ದಾನೆ. ಆದರೂ ಮಗು ಬದುಕಿಲ್ಲ. ಬಳಿಕ ಅಂತ್ಯಕ್ರಿಯೆ ನಡೆಸಲಾಗಿದೆ.
ಘಟನೆಯ ವಿವರ:ಮಾಹಿತಿ ಪ್ರಕಾರ, ಠಾಣಾ ಕಾಂತ್ ಪ್ರದೇಶದ ರಾವತ್‌ಪುರ ನಿವಾಸಿ ಮಂಗಲ್ ಸಿಂಗ್ ಅವರ 6 ವರ್ಷದ ಮಗಳು ರಾತ್ರಿ ತನ್ನ ಕುಟುಂಬ ಸದಸ್ಯರೊಂದಿಗೆ ಗುಡಿಸಲಿನಲ್ಲಿ ಮಲಗಿದ್ದಳು. ಆಗ ಹಾವೊಂದು ಆಕೆಯನ್ನು ಕಚ್ಚಿದೆ. ಬಳಿಕ ಕುಟುಂಬಸ್ಥರು ಬಾಲಕಿಯನ್ನು ಮಾಂತ್ರಿಕನ ಬಳಿಗೆ ಕರೆದೊಯ್ದು ವಿಷ ತೆಗೆಯಲು ಯತ್ನಿಸಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಮನೆಯವರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಬಾಲಕಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಇದಾದ ಬಳಿಕವೂ ಬಾಲಕಿ ಬದುಕಿದ್ದಾಳೆ ಎಂದು ಮಾಂತ್ರಿಕ ಕುಟುಂಬಸ್ಥರನ್ನು ನಂಬಿಸಿದ್ದಾನೆ. ಬಾಲಕಿಯನ್ನು ತಾನು ಬದುಕಿಸುತ್ತೇನೆ ಎಂದು ಮೃತದೇಹವನ್ನು ಹಸುವಿನ ಸಗಣಿಯಲ್ಲಿ ಹೂಳಿಸಿದ್ದಾನೆ. ಅದರ ಸುತ್ತಲೂ ಬೇವಿನ ಎಲೆಗಳನ್ನು ಹಾಕಿ ತಂತ್ರ ವಿದ್ಯೆಯ ಪ್ರಯೋಗ ಮಾಡಿದ್ದಾನೆ. ಎಷ್ಟೇ ಪ್ರಯತ್ನಿಸಿದರೂ, ಹೋದ ಜೀವ ವಾಪಸ್ ಬಂದೀತೆ.
ಮೃತ ದೇಹವನ್ನು ದನದ ಸಗಣಿಯಲ್ಲಿ ಹೂತಿಟ್ಟಿರುವ ಮಾಹಿತಿ ಆ ಪ್ರದೇಶದಲ್ಲಿ ವೇಗವಾಗಿ ಹರಡಿದೆ. ನಂತರ ದೂರದ ಹಳ್ಳಿಗಳಿಂದ ಜನರು ತಂತ್ರ ವಿದ್ಯೆಯನ್ನು ನೋಡಲು ಬರಲಾರಂಭಿಸಿದ್ದಾರೆ. ಈ ಸುದ್ದಿ ವೇಗವಾಗಿ ಹರಡಿ ಪೊಲೀಸರ ಕಿವಿಗೂ ಬಿದ್ದಿದೆ. ಸ್ಥಳಕ್ಕೆ ಬಂದ ಪೊಲೀಸರು ಕುಟುಂಬ ಸದಸ್ಯರಿಗೆ ಈ ಬಗ್ಗೆ ಅರಿವು ಮೂಡಿಸಿದ್ದಾರೆ. ಅವರ ಮನವೊಲಿಸಿ ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸಿದ್ದಾರೆ.
1 ತಾಸಿನಲ್ಲಿ ಆಸ್ಪತ್ರೆಗೆ ತನ್ನಿ:ಹಾವು ಕಚ್ಚಿದ ಬಳಿಕ ಒಂದು ಗಂಟೆ ಗೋಲ್ಡನ್ ಪೀರಿಯಡ್. ಅಷ್ಟರೊಳಗೆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆತರಬೇಕು. ಆಗ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸಲು ಸಾಧ್ಯ. ಮಾಂತ್ರಿಕ ವಿದ್ಯೆಯಿಂದ ಏನೂ ಮಾಡಲು ಸಾಧ್ಯವಿಲ್ಲ. ಆಸ್ಪತ್ರೆಗೆ ಕರೆದೊಯ್ಯದಿದ್ದರೆ, ರೋಗಿಯು ಸಾಯಬಹುದು ಅಷ್ಟೇ. ಸದ್ಯ ದಿನಕ್ಕೆ 3 ರಿಂದ 4 ಹಾವು ಕಡಿತದ ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದಾರೆ. ಅಂತಹ ರೋಗಿಗಳನ್ನು ಆಸ್ಪತ್ರೆಯಲ್ಲಿ ವೈದ್ಯರು ನಿಗಾ ವಹಿಸುತ್ತಿದ್ದಾರೆ ಎಂದು ಷಹಜಹಾನ್‌ಪುರ ವೈದ್ಯಕೀಯ ಕಾಲೇಜಿನ ತುರ್ತು ವಿಭಾಗದ ಡಾ.ರಾಹುಲ್ ಯಾದವ್ ಹೇಳಿದರು.
ಇದನ್ನೂ ಓದಿ:43 ವರ್ಷಗಳ ಹಿಂದಿನ ಗಲಭೆ ವರದಿ ಮಂಡಿಸಿದ ಯೋಗಿ ಸರ್ಕಾರ: 15 ಸಿಎಂ ಬದಲಾದರೂ ನನೆಗುದಿಗೆ ಬಿದ್ದಿದ್ದ ವರದಿ!