ನವದೆಹಲಿ:ಇಂದು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಜನ್ಮದಿನ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಇತರ ಗಣ್ಯರು ನವದೆಹಲಿಯ ಶಾಂತಿ ವನಕ್ಕೆ ತೆರಳಿ ನೆಹರು ಸಮಾಧಿಗೆ ಪುಷ್ಪ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್ ಖಾತೆಯಲ್ಲಿ ಗೌರವ ಸೂಚಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ನಿರತರಾಗಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಮುತ್ತಾತನನ್ನು ಸ್ಮರಿಸಿದ್ದು, ಅಪರೂಪದ ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತ ಮಾತೆ ಯಾರು?, ಭಾರತದ ಜನರು ಈ ವಿಶಾಲವಾದ ಭೂಮಿಯಲ್ಲಿ ಹೆಚ್ಚು-ಹೆಚ್ಚು ಹರಡಿದ್ದಾರೆ. ಇಲ್ಲಿ ಕೋಟಿ ಕೋಟಿ ಜನರೇ ಭಾರತದ ತಾಯಿ. ಪಂಡಿತ್ ನೆಹರೂ ಅವರ ಪ್ರಜಾಸತ್ತಾತ್ಮಕ, ಪ್ರಗತಿಪರ ಮತ್ತು ಜಾತ್ಯತೀತ ಮೌಲ್ಯಗಳನ್ನು ನನ್ನ ಹೃದಯದಲ್ಲಿ ಹೊತ್ತುಕೊಂಡು, 'ಹಿಂದು ರತ್ನ'ವಾದ ಭಾರತಮಾತೆಯನ್ನು ರಕ್ಷಿಸಲು ನಾನು ಸಂಕಲ್ಪ ಹೊತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದ ಜವಾಹರ್ಲಾಲ್ ನೆಹರೂ 1964ರ ಮೇ 27 ರಂದು ಇಹಲೋಕ ತ್ಯಜಿಸಿದ್ದರು. ಪ್ರಧಾನಿಯಾಗಿ ದೀರ್ಘಾವಧಿಗೆ ಸೇವೆ ಸಲ್ಲಿಸಿದ ಕೀರ್ತಿಯೂ ಅವರಿಗೆ ಸಲ್ಲುತ್ತದೆ. ನವೆಂಬರ್ 14 ರ ನೆಹರೂ ಜನ್ಮದಿನವನ್ನು ದೇಶದಲ್ಲಿ ಮಕ್ಕಳ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇದನ್ನೂ ಓದಿ:ಬಾಲಿಯಲ್ಲಿ ಜಿ20 ಶೃಂಗಸಭೆ: 45 ಗಂಟೆ, 20 ಸಭೆಗಳಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ಮೋದಿ