ಬಾಲಿವುಡ್ ಖ್ಯಾತ ನಟ ದಿಲೀಪ್ ಕುಮಾರ್ ಇಂದು ಬೆಳಗ್ಗೆ 7.30ರ ಸುಮಾರಿಗೆ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಮುಂಬೈನ ಹಿಂದೂಜಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇವರ ನಿಧನಕ್ಕೆ, ರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಬಾಲಿವುಡ್ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್, "ದಿಲೀಪ್ ಸಾಬ್ ಸ್ವತಃ ಉದಯೋನ್ಮುಖ ಭಾರತದ ಇತಿಹಾಸವನ್ನು ಸಂಕ್ಷಿಪ್ತಗೊಳಿಸಿದ್ದಾರೆ. ಅವರು ಭಾರತೀಯರ ಹೃದಯದಲ್ಲಿ ಶಾಶ್ವತವಾಗಿ ಬದುಕುತ್ತಾರೆ" ಎಂದು ಸಂತಾಪ ಸೂಚಿಸಿದ್ದಾರೆ.
ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, "ಅವರನ್ನು ಸಿನಿಮೀಯ ದಂತಕಥೆಯೆಂದು ಸ್ಮರಿಸಲಾಗುವುದು. ಅವರು ಸಾಟಿಯಿಲ್ಲದ ತೇಜಸ್ಸು. ಈ ಕಾರಣದಿಂದಾಗಿ ತಲೆಮಾರುಗಳ ಪ್ರೇಕ್ಷಕರು ಅವರ ನಟನೆಗೆ ಮನಸೋತಿದ್ದಾರೆ. ಅವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತಿಗೆ ನಷ್ಟವಾಗಿದೆ" ಎಂದು ಕಂಬನಿ ಮಿಡಿದಿದ್ದಾರೆ.
ಹಿರಿಯ ನಟ ದಿಲೀಪ್ ಕುಮಾರ್ ಅವರ ನಿಧನದ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಹ ಮಾತನಾಡಿದ್ದಾರೆ. "ಬಾಲಿವುಡ್ನ ಒಂದು ಅಧ್ಯಾಯ ಅಂತ್ಯ" ಎಂದು ದುಃಖ ವ್ಯಕ್ತಪಡಿಸಿದ್ದಾರೆ.