ಲಂಡನ್:ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಂಡನ್ಗೆ ಭೇಟಿ ನೀಡಿದ್ದು, ಭಾನುವಾರ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆ ಮೇಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಖಾದರ್ ಹಾಗೂ ಹೊರಟ್ಟಿ ಅವರನ್ನು ಸ್ವಾಗತಿಸಿದರು. ಖಾದರ್ ಬಸವಣ್ಣನವರ ಪ್ರತಿಮೆಗೆ ವಿಭೂತಿ ಹಚ್ಚಿದರು. ಈ ಸಂದರ್ಭದಲ್ಲಿ ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಜಿತ್ ಮುತ್ತಾಯಿಲ್ ನೇತೃತ್ವದಲ್ಲಿ ಬ್ರಿಟಿಷ್ ಭಾರತೀಯ/ ಕನ್ನಡ ಸಮುದಾಯದ ಸದಸ್ಯರು ಮತ್ತು ಭಾರತೀಯ ಸಾಗರೋತ್ತರ ಕಾಂಗ್ರೆಸ್‌ನ ಪ್ರತಿನಿಧಿಗಳು ಇದ್ದರು.
ಬ್ರಿಟಿಷ್ ಸಂಸತ್ತಿನ ಎದುರು ಭಾರತೀಯ ಪ್ರಜಾಪ್ರಭುತ್ವದ ಪ್ರವರ್ತಕ ಮತ್ತು ಶ್ರೇಷ್ಠ ಭಾರತೀಯ ಹಾಗೂ ಕನ್ನಡದ ಸಾಮಾಜಿಕ ಸುಧಾರಕನ ಪ್ರತಿಮೆ ನೋಡುವುದು ಪ್ರತಿಯೊಬ್ಬ ಭಾರತೀಯ ಮತ್ತು ಕನ್ನಡಿಗನಿಗೆ ಹೆಮ್ಮೆಯ ಸಂಗತಿ ಎಂದು ಖಾದರ್ ಹಾಗೂ ಹೊರಟ್ಟಿ ಸಂತಸ ವ್ಯಕ್ತಪಡಿಸಿದರು. ಲ್ಯಾಂಬೆತ್ ಬಸವೇಶ್ವರ ಪ್ರತಿಷ್ಠಾನದ ಶ್ರಮ ಮತ್ತು ಪ್ರತಿಮೆ ಸ್ಥಾಪಿಸಿರುವುದಕ್ಕೆ ಇಬ್ಬರೂ ನಾಯಕರು ಧನ್ಯವಾದ ತಿಳಿಸಿದರು. ಯುಕೆ ಮೂಲದ ಸಂಸ್ಥೆಯಾದ ಲ್ಯಾಂಬೆತ್ ಬಸವೇಶ್ವರ ಫೌಂಡೇಶನ್ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. 2015ರಲ್ಲಿ ಥೇಮ್ಸ್ ನದಿಯ ದಡದಲ್ಲಿ ಬಸವೇಶ್ವರ ಪ್ರತಿಮೆಯನ್ನು ಇದೇ ಫೌಂಡೇಶನ್ ಸ್ಥಾಪಿಸಿದೆ.