ನವದೆಹಲಿ: ಮನುಷ್ಯರಿಗೆ ಏನಾದರೂ ತೊಂದರೆ ಉಂಟಾದರೆ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಿ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತದೆ. ಇತ್ತೀಚಿಗೆ ಪ್ರಾಣಿ ಪಕ್ಷಿಗಳಿಗೂ ಸಹ ಪರಿಸರ ಪ್ರೇಮಿಗಳು ಈ ವ್ಯವಸ್ಥೆಯನ್ನು ಅನುಸರಿಸುತ್ತಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ದೆಹಲಿ ಮಹಾನಗರ ಪಾಲಿಕೆ ಟ್ರೀ ಆ್ಯಂಬುಲೆನ್ಸ್ ಅನ್ನು ಪರಿಚಯಿಸಿದೆ. ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಈ ವಿಭಿನ್ನ ಆಲೋಚನೆಯನ್ನು ಅನುಷ್ಠಾನಕ್ಕೆ ತಂದಿದೆ. ಅನಾರೋಗ್ಯ ಮತ್ತು ದುರ್ಬಲ ಮರಗಳ ಚಿಕಿತ್ಸೆಗಾಗಿ ಹೊಸ ಉಪಕ್ರಮವನ್ನು ತೆಗೆದುಕೊಂಡಿದೆ. ಮರಗಳಿಗೆ ಚಿಕಿತ್ಸೆ ನೀಡಲು ಉಚಿತ ಆ್ಯಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಿದೆ.
ಪೂರ್ವ ದೆಹಲಿ ಮಹಾನಗರ ಪಾಲಿಕೆಯ ತೋಟಗಾರಿಕೆ ಇಲಾಖೆಯ ನಿರ್ದೇಶಕ ರಾಘವೇಂದ್ರ ಸಿಂಗ್ ಈ ಸಂಬಂಧ ಪ್ರತಿಕ್ರಿಯಿಸಿದ್ದು, ದೆಹಲಿ ಹೈಕೋರ್ಟ್‌ನ ಆದೇಶದ ಮೇರೆಗೆ ಪೂರ್ವ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಟ್ರೀ ಆ್ಯಂಬುಲೆನ್ಸ್ ಅನ್ನು ಪರಿಚಯಿಸಿದೆ. ಅನಾರೋಗ್ಯ ಮತ್ತು ದುರ್ಬಲ ಮರಗಳನ್ನು ಈ ಮೂಲಕ ಉಪಚರಿಸಲಾಗುತ್ತದೆ. ಈ ಪ್ರದೇಶದಲ್ಲಿ ಯಾವುದೇ ಮರಕ್ಕೆ ರೋಗ ತಗುಲಿರುವ ಬಗ್ಗೆ ಮಾಹಿತಿ ಬಂದರೆ ಈ ಆ್ಯಂಬುಲೆನ್ಸ್‌ನಲ್ಲಿ ಹೋಗಿ ತಪಾಸಣೆ ನಡೆಸಿ ನಂತರ ರೋಗಕ್ಕೆ ಅನುಗುಣವಾಗಿ ಮರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದರು.