ಲಂಡನ್:ಜಗತ್ತಿನಲ್ಲಿ ಕೊರೊನಾ ಪ್ರಮಾಣ ಹೆಚ್ಚಾಗುತ್ತಿದ್ದು ಎಲ್ಲಾ ದೇಶಗಳು ಪ್ರವಾಸಿಗರು, ಉದ್ಯೋಗಸ್ಥರು ತಮ್ಮ ದೇಶಗಳನ್ನು ಪ್ರವೇಶಿಸದಂತೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಿದ್ದವು. ಆ ಬಳಿಕ ಸೋಂಕು ನಿಯಂತ್ರಣಕ್ಕೆ ಬರುತ್ತಿದ್ದಂತೆ ನಿರ್ಬಂಧ ಸಡಿಲಗೊಳಿಸಿ, ಲಸಿಕೆ ಹಾಕಿಸಿಕೊಳ್ಳುವುದು ಮತ್ತು ಕ್ವಾರಂಟೈನ್ ನಿಯಮವನ್ನು ಕಡ್ಡಾಯಗೊಳಿಸಿದ್ದವು. ಅದೇ ರೀತಿ, ಬ್ರಿಟನ್ ಸರ್ಕಾರ ಕೂಡಾ ಭಾರತದಿಂದ ಆಗಮಿಸುವ ಜನರಿಗೆ ಇನ್ನಿತರ ಕೋವಿಡ್ ನಿರ್ಬಂಧಗಳ ಜೊತೆಗೆ 10 ದಿನಗಳ ಕಡ್ಡಾಯ ಹೋಟೆಲ್ ಕ್ವಾರಂಟೈನ್ ನಿಯಮ ವಿಧಿಸಿತ್ತು.
ಆದರೀಗ ಭಾರತದಿಂದ ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರು ಕಡ್ಡಾಯ ಹೋಟೆಲ್ ಕ್ವಾರಂಟೈನ್‌ಗೆ ಒಳಗಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಭಾರತವನ್ನು ಕೋವಿಡ್ ಕೆಂಪು ಪಟ್ಟಿಯಿಂದ ಯೆಲ್ಲೋ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಬ್ರಿಟನ್ ಸರ್ಕಾರ ತಿಳಿಸಿದೆ. ಭಾರತ ಮತ್ತು ಬ್ರಿಟನ್ ನಡುವಿನ ಪ್ರಯಾಣದ ನಿಯಮಗಳನ್ನು ಸಡಿಲಗೊಳಿಸುವಂತೆ ಅನಿವಾಸಿ ಭಾರತೀಯರು ಒತ್ತಾಯಿಸುತ್ತಿದ್ದರು.
ಬ್ರಿಟನ್‌ನ 'ಟ್ರಾಫಿಕ್ ಲೈಟ್ ವ್ಯವಸ್ಥೆ' ಅಡಿಯಲ್ಲಿ ಯೆಲ್ಲೋ ಲಿಸ್ಟ್ನಲ್ಲಿರುವ ದೇಶಗಳ ಪ್ರಯಾಣಿಕರು ಆಗಮಿಸಿದರೆ ಮನೆಯಲ್ಲಿಯೇ 10 ದಿನಗಳ ಕ್ವಾರಂಟೈನ್ ಆಗಬೇಕಿದೆ. "ಯುಎಇ, ಕತಾರ್, ಭಾರತ ಮತ್ತು ಬಹ್ರೇನ್ ದೇಶದ ಜನರನ್ನು ಕೆಂಪು ಪಟ್ಟಿಯಿಂದ ಯೆಲ್ಲೋ ಪಟ್ಟಿಗೆ ವರ್ಗಾಯಿಸಲಾಗಿದೆ. ಎಲ್ಲಾ ಬದಲಾವಣೆಗಳು ಆಗಸ್ಟ್ 8ರ ಬೆಳಿಗ್ಗೆ 4 ಗಂಟೆಯಿಂದ (ಸ್ಥಳೀಯ ಕಾಲಮಾನ) ಜಾರಿಗೆ ಬರಲಿದೆ" ಎಂದು ಯುಕೆ ಸಾರಿಗೆ ಕಾರ್ಯದರ್ಶಿ ಟ್ವೀಟ್ ಮಾಡಿದ್ದಾರೆ.