ಭುವನೇಶ್ವರ್(ಒಡಿಶಾ):ವಿವಿಧ ಜನವಿರೋಧಿ ನೀತಿಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ ಹಾಗೂ ಕಾರ್ಮಿಕ ಸಂಘಟನೆಗಳ ಕರೆಯ ಮೇರೆಗೆ ದೇಶದಾದ್ಯಂತ ಸಾರ್ವತ್ರಿಕ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದ್ದು, ಇಂದೂ ಕೂಡ ಮುಷ್ಕರ ಮುಂದುವರಿಯಲಿದೆ. ಈ ಮುಷ್ಕರದ ಬಿಸಿ ಕೆಲವೆಡೆ ತಟ್ಟಿದ್ದರೆ, ಮತ್ತೆ ಹಲವೆಡೆ ಅಂಥಹ ಪರಿಣಾಮವೇನೂ ಬೀರಿಲ್ಲ. ಆದರೆ ಮುಷ್ಕರದ ಮೊದಲ ದಿನವಾದ ಸೋಮವಾರ ಒಡಿಶಾದಲ್ಲಿ ಬ್ಯಾಂಕಿಂಗ್ ಕಾರ್ಯಾಚರಣೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕ ಸಾರಿಗೆಯು ರಸ್ತೆಯಿಂದ ಹೊರಗುಳಿದಿತ್ತು. ರೈಲು ಸೇವೆಗಳಿಗೂ ತೊಂದರೆಯಾಗಿತ್ತು.
ಮುಷ್ಕರದ ಪರಿಣಾಮ ಭುವನೇಶ್ವರ್, ಕಟಕ್, ಸಂಬಲ್‌ಪುರ, ಬೆರ್ಹಾಂಪುರ ಮತ್ತು ಕೈಗಾರಿಕಾ ವಲಯಗಳಲ್ಲಿ ಸಾರಿಗೆ ಸೇವೆಗಳು ಅಸ್ತವ್ಯಸ್ತಗೊಂಡಿವೆ. ರಾಜ್ಯದ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ನೂರಾರು ಟ್ರಕ್‌ಗಳು ಸಾಲುಗಟ್ಟಿ ನಿಂತಿರುವುದು ಕಂಡು ಬಂದಿದೆ. ಭುವನೇಶ್ವರ್, ಬೆರ್ಹಾಂಪುರ ಮತ್ತು ಇತರ ಕೆಲವು ರೈಲು ನಿಲ್ದಾಣಗಳಲ್ಲಿ 'ರೈಲ್ ರೋಕೋ' ಚಳವಳಿ ನಡೆಸಿದ ಹಿನ್ನೆಲೆ ರೈಲು ಸೇವೆಗಳಿಗೆ ಭಾರಿ ತೊಂದರೆಯಾಯಿತು. ಇನ್ನೂ ಮುಷ್ಕರದಿಂದಾಗಿ ಬ್ಯಾಂಕ್‌ಗಳ ಸೇವೆಗಳ ಮೇಲೂ ಭಾರಿ ಪರಿಣಾಮ ಬೀರಿತು..