ನವ ದೆಹಲಿ:ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಲ್ಲಿ ನ್ಯಾಯಾಂಗದ ಯಾರಾದರೊಬ್ಬರ ಉಪಸ್ಥಿತಿಯು ನೇಮಕಾತಿಯಲ್ಲಿ ಪಾರದರ್ಶಕತೆ ಮತ್ತು ಸ್ವಾತಂತ್ರ್ಯವನ್ನು ಖಚಿತಪಡಿಸುತ್ತದೆ ಎಂಬುದು ಕೇವಲ ಊಹೆ ಎಂದು ಕೇಂದ್ರ ಸರ್ಕಾರವು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.
ನ್ಯಾಯಮೂರ್ತಿ ಕೆ ಎಂ ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರ ಪೀಠದ ಮುಂದೆ ಕೇಂದ್ರ ಸರ್ಕಾರದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನ್ಯಾಯಾಂಗದ ಉಪಸ್ಥಿತಿಯಿಂದ ಮಾತ್ರ ಸ್ವಾತಂತ್ರ್ಯ ಮತ್ತು ನ್ಯಾಯಸಮ್ಮತತೆ ಸಾಧಿಸಲಾಗುತ್ತದೆ ಎಂಬುದು ಊಹೆಯಾಗುತ್ತದೆ ಎಂದು ಹೇಳಿದರು.
ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ, ಅನಿರುದ್ಧ ಬೋಸ್, ಹೃಷಿಕೇಶ್ ರಾಯ್ ಮತ್ತು ಸಿಟಿ ರವಿಕುಮಾರ್ ಅವರನ್ನೊಳಗೊಂಡ ಪೀಠದ ಎದುರು ವಾದ ಮಂಡಿಸಿದ ಮೆಹ್ತಾ, ಮುಖ್ಯ ಚುನಾವಣಾ ಆಯುಕ್ತರು ಮತ್ತು ಚುನಾವಣಾ ಆಯುಕ್ತರ ನೇಮಕಾತಿಯು ಕಾನೂನಿನ ಅನುಪಸ್ಥಿತಿಯಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸದಸ್ಯರಾಗಿ ಒಳಗೊಂಡಿರುವ ಕೊಲಿಜಿಯಂ ಮಾದರಿಯ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂಬ ಅರ್ಜಿದಾರರ ಪ್ರಸ್ತಾಪವನ್ನು ಮಾನ್ಯ ಮಾಡಲು ಸಾಧ್ಯವಿಲ್ಲ ಎಂದರು.
ಕಾನೂನು ಇಲ್ಲದಿರುವಾಗ ಇದೇ ಕಾನೂನಾಗಿರಬೇಕು ಎಂದು ಘನ ನ್ಯಾಯಾಲಯ ಹೇಳಲು ಸಾಧ್ಯವಿಲ್ಲ. ಏಕೆಂದರೆ ನ್ಯಾಯಾಲಯವು ಸಂವಿಧಾನದೊಂದಿಗೆ ವ್ಯವಹರಿಸುತ್ತಿದೆಯೇ ಹೊರತು ಶಾಸನದೊಂದಿಗೆ ಅಲ್ಲ ಎಂದು ಅವರು ಹೇಳಿದರು.