ಕೌಶಂಬಿ(ಉತ್ತರ ಪ್ರದೇಶ):ತೃತೀಯಲಿಂಗಿಯೊಬ್ಬರು ತನ್ನ ಪ್ರಿಯಕರನಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಕೌಶಂಬಿ ಜಿಲ್ಲೆಯಲ್ಲಿ ನಡೆದಿದೆ. ತೃತೀಯ ಲಿಂಗಿಗೆ ಯುವಕನೊಬ್ಬನ ಜೊತೆಗೆ ಸ್ನೇಹ ಏರ್ಪಟ್ಟಿತ್ತು. ನಂತರ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ ಪರಸ್ಪರ ಇಚ್ಛೆಯಿಂದ ಮದುವೆಯಾಗಲು ನಿರ್ಧರಿಸಿದ್ದರು. ದೇವಾಲಯದಲ್ಲಿ ಮದುವೆಯಾಗಿ ಕೆಲವು ತಿಂಗಳುಗಳ ಕಾಲ ಇಬ್ಬರೂ ಒಟ್ಟಿಗೆ ಇದ್ದರು. ಆದರೆ ಈ ವಿಷಯ ತಿಳಿದ ಯುವಕನ ಕುಟುಂಬಸ್ಥರು, ಯುವಕನನ್ನು ಅಲ್ಲಿಂದ ಕರೆದ್ಯೊದಿದ್ದಾರೆ. ಸದ್ಯ ತೃತೀಯಲಿಂಗಿ ತನ್ನ ಪ್ರಿಯಕರನಿಗೋಸ್ಕರ ಪೊಲೀಸರ ಮೊರೆ ಹೋಗಿದ್ದಾರೆ.
ಕೌಶಂಬಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹೇಶ್ ಚಂದ್ರ ಮಾತನಾಡಿ, ಇಲ್ಲಿನ ಗ್ರಾಮವೊಂದರಲ್ಲಿ ದಂಪತಿಗೆ ಗಂಡು ಮಗು ಜನಿಸಿತ್ತು. ಯುವಕ ದೊಡ್ಡವನಾದಂತೆ ಆತನಲ್ಲಿ ಕಂಡು ಬಂದ ದೈಹಿಕ ಬದಲಾವಣೆಗಳಿಂದ ಕುಟುಂಬಸ್ಥರು ಆತನನ್ನು ಅವಮಾನಿಸುವುದು, ತಾರತಮ್ಯ ಮಾಡುವುದಕ್ಕೆ ಪ್ರಾರಂಭಿಸಿದ್ದರು. ಇದರಿಂದ ಮನನೊಂದ ಯುವಕ ಮನೆಬಿಟ್ಟು ಹೋಗಿ ತೃತೀಯ ಲಿಂಗಿಯಾಗಿ ಬದಲಾಗುತ್ತಾನೆ. ನಂತರ ತೃತೀಯಲಿಂಗಿಗಳೊಂದಿಗೆ ಸೇರಿಕೊಂಡು ಜೀವನ ನಡೆಸುತ್ತಿರುತ್ತಾನೆ. ಈ ವೇಳೆ ತೃತೀಯಲಿಂಗಿಗೆ ಗ್ರಾಮದ ಯುವಕನೊಬ್ಬನ ಪರಿಚಯವಾಗಿ ನಂತರ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.
ತೃತೀಯಲಿಂಗಿ ಯುವಕನನ್ನು ಮದುವೆಯಾಗಲು ಎಂಟು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಹೆಣ್ಣಾಗಿ ಬದಲಾಗಿ ಇಬ್ಬರೂ ದೇವಸ್ಥಾನದಲ್ಲಿ ವಿವಾಹವಾಗಿದ್ದರು. ನಂತರ ಇಬ್ಬರು ಆರು ತಿಂಗಳು ಒಟ್ಟಿಗೆ ಇದ್ದರು. ಅಷ್ಟರಲ್ಲಿ ಯುವಕನ ಮನೆಯವರಿಗೆ ಈ ವಿಷಯ ತಿಳಿದಿದೆ. ಇದಾದ ಬಳಿಕ ಕುಟುಂಬಸ್ಥರು ಯುವಕನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ಯುವಕನ ಜೊತೆ ತೃತೀಯಲಿಂಗಿ ಸಂಪರ್ಕಕ್ಕೆ ಬರದಂತೆ ತಡೆದಿದ್ದಾರೆ.