ಬಾಲಘಾಟ್ (ಮಧ್ಯಪ್ರದೇಶ): ತರಬೇತಿ ವಿಮಾನವೊಂದು ಪತನಗೊಂಡು ಪೈಲಟ್ ಮತ್ತು ಸಹ ಪೈಲಟ್ ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ನಡೆದಿದೆ. ವಿಮಾನದ ಅವಶೇಷಗಳಲ್ಲಿ ಸುಟ್ಟ ಹೋದ ಮೃತ ದೇಹವೊಂದು ಪತ್ತೆಯಾಗಿದ್ದು, ಮತ್ತೊಂದು ಮೃತದೇಹ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಪತನಗೊಂಡ ಈ ವಿಮಾನವು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಬಿರ್ಸಿ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2 ಗಂಟೆ ಸುಮಾರಿಗೆ ಹಾರಾಟ ಮಾಡಿತ್ತು. ಆದರೆ, ಇದಾದ ನಂತರ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲಾ ಕೇಂದ್ರದಿಂದ ಸುಮಾರು 40 ಕಿಮೀ ದೂರದಲ್ಲಿ ಜಿಲ್ಲೆಯ ಗಡಿಯ ಬಳಿ ಪತನಗೊಂಡಿದೆ. ಲಾಂಜಿ ಮತ್ತು ಕಿರ್ನಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಭಕ್ಕುಟೋಲಾ ಬೆಟ್ಟದ ಮೇಲೆ ವಿಮಾನ ಪತನವಾಗಿದೆ ಎಂದು ತಿಳಿದು ಬಂದಿದೆ.
ಈ ಘಟನೆಯ ಮಾಹಿತಿ ಪಡೆದ ಬಾಲಘಾಟ್ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದಾರೆ. ಮಹಿಳಾ ಟ್ರೈನಿ ಪೈಲಟ್ ಮತ್ತು ಪೈಲಟ್ ಸೇರಿ ಇಬ್ಬರು ಮೃತಪಟ್ಟಿರುವುದು ಖಚಿತವಾಗಿದೆ. ಮೃತರನ್ನು ಮಹಿಳಾ ಟ್ರೈನಿ ಪೈಲಟ್ ರುಕ್ಷಾಂಕಾ ಹಾಗೂ ಪೈಲಟ್ ಮೋಹಿತ್ ಎಂದು ಗುರುತಿಸಲಾಗಿದೆ. ಈ ಘಟನೆ ಮತ್ತು ಪೈಲಟ್ಗಳ ಸಾವಿನ ಬಗ್ಗೆ ಮಹಾರಾಷ್ಟ್ರದ ಗೊಂಡಿಯಾ ಎಟಿಸಿಯ ಎಜಿಎಂ ಕಮಲೇಶ್ ಮೆಶ್ರಾಮ್ ದೃಢಪಡಿಸಿದ್ದಾರೆ.
ವಿಮಾನ ಪತನಗೊಂಡ ಭಕ್ಕುಟೋಲಾ ಗ್ರಾಮವು ಲಾಂಜಿಯ ನಕ್ಸಲ್ ಪೀಡಿತ ಪ್ರದೇಶವಾಗಿದೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಪೊಲೀಸರು ಹಾಗೂ ತಂಡ ಪರಿಶೀಲನೆ ನಡೆಸುತ್ತಿದೆ. ಆದರೆ, ಸದ್ಯಕ್ಕೆ ಅಪಘಾತಕ್ಕೆ ಕಾರಣವೇನು ಎಂಬುವುದು ಇನ್ನೂ ತಿಳಿದುಬಂದಿಲ್ಲ.
ಇದನ್ನೂ ಓದಿ:ಮಧ್ಯಪ್ರದೇಶದಲ್ಲಿ ಸುಖೋಯ್-30, ಮಿರಾಜ್-2000 ಯುದ್ಧ ವಿಮಾನಗಳು ಪತನ.. ಒಬ್ಬ ಪೈಲಟ್ ಸಾವು
ಜನವರಿಯಲ್ಲಿ ಪತನವಾಗಿದ್ದ ಎರಡು ವಿಮಾನಗಳು:ಕಳೆದ ಜನವರಿಯಲ್ಲೂ ಇದೇ ಮಧ್ಯಪ್ರದೇಶದಲ್ಲಿ ಭಾರತೀಯ ವಾಯು ಪಡೆಯ ಯುದ್ಧ ವಿಮಾನಗಳು ಪತನಗೊಂಡಿದ್ದವು. ಜ.18ರಂದು ನಡೆದ ಈ ಘಟನೆ ಕರ್ನಾಟಕ ರಾಜ್ಯದ ಬೆಳಗಾವಿ ಮೂಲದ ಪೈಲಟ್, ವಿಂಗ್ ಕಮಾಂಡರ್ ಹನುಮಂತರಾವ್ ಸಾರಥಿ ಮರಣ ಹೊಂದಿದ್ದರು.
ಮಧ್ಯಪ್ರದೇಶದ ಗ್ವಾಲಿಯರ್ ವಾಯು ನೆಲೆಯ ಬಳಿ ಭಾರತೀಯ ವಾಯು ಪಡೆಯ ಸುಖೋಯ್ 30 ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ದೈನಂದಿನ ಹಾರಾಟ ತರಬೇತಿಯಲ್ಲಿ ತೊಡಗಿದ್ದವು. ಗ್ವಾಲಿಯರ್ ವಾಯು ನೆಲೆಯಿಂದ ಟೇಕ್ ಆಫ್ ಆಗಿದ್ದ ಈ ವಿಮಾನಗಳ ನಡುವೆ ಮೊರೆನಾ ಜಿಲ್ಲೆಯಲ್ಲಿ ಡಿಕ್ಕಿ ಸಂಭವಿಸಿತ್ತು. ಈ ಡಿಕ್ಕಿಯಿಂದ ವಿಮಾನಗಳ ಅವಶೇಷಗಳು ಎರಡು ಪ್ರತ್ಯೇಕ ಸ್ಥಳಗಳಲ್ಲಿ ಬಿದ್ದಿದ್ದವು. ಒಂದು ವಿಮಾನದ ಅವಶೇಷಗಳು ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಬಿದ್ದಿದ್ದರೆ, ಮತ್ತೊಂದು ವಿಮಾನದ ಅವಶೇಷಗಳು ನೆರೆಯ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದವು.
ಹೀಗಾಗಿ ಆರಂಭದಲ್ಲಿ ಎರಡೂ ವಿಮಾನಗಳು ಪ್ರತ್ಯೇಕವಾಗಿ ಪತನಗೊಂಡಿವೆ ಎಂಬ ಶಂಕೆ ಉಂಟಾಗಿತ್ತು. ನಂತರ ಈ ಘಟನೆ ಬಗ್ಗೆ ಮಾಹಿತಿ ನೀಡಿದ್ದ ಭಾರತೀಯ ವಾಯು ಪಡೆಯು ಅಧಿಕಾರಿಗಳು, ಕೇವಲ ಒಂದು ಅಪಘಾತವಾಗಿದ್ದು, ಎರಡು ಯುದ್ಧ ವಿಮಾನಗಳ ನಡುವೆ ಡಿಕ್ಕಿ ಸಂಭವಿಸಿದೆ. ಈ ಡಿಕ್ಕಿಯಿಂದ ಅವಶೇಷಗಳು ಎರಡು ವಿಭಿನ್ನ ಸ್ಥಳಗಳಲ್ಲಿ ಬಿದ್ದಿವೆ. ಮಿರಾಜ್‌ನ ಅವಶೇಷಗಳು ಮಧ್ಯಪ್ರದೇಶದ ಮೊರೆನಾದಲ್ಲಿ ಬಿದ್ದಿದ್ದರೆ, ಸುಖೋಯ್‌ನ ಅವಶೇಷಗಳು ರಾಜಸ್ಥಾನದ ಭರತ್‌ಪುರದಲ್ಲಿ ಬಿದ್ದಿವೆ ಎಂದು ಮಾಹಿತಿ ನೀಡಿದ್ದರು.
ಇದನ್ನೂ ಓದಿ:ಸುಖೋಯ್ - ಮಿರಾಜ್ ಯುದ್ಧ ವಿಮಾನಗಳ ಅಪಘಾತ: ವಿಂಗ್ ಕಮಾಂಡರ್, ಕನ್ನಡಿಗ ಹನುಮಂತರಾವ್ ಸಾರಥಿ ಮರಣ