ನಿಜಾಮಾಬಾದ್ (ತೆಲಂಗಾಣ): ಅಪಘಾತದಲ್ಲಿ ತನ್ನ ತಂದೆ ಮೃತಪಟ್ಟಿರುವುದು ಗೊತ್ತಾಗದ ಮೂರು ವರ್ಷದ ಮುಗ್ಧ ಬಾಲಕನೊಬ್ಬ ತಂದೆಯ ಶವದ ಪಕ್ಕದಲ್ಲೇ ರಾತ್ರಿಯಿಡೀ ಮಲಗಿರುವ ಹೃದಯವಿದ್ರಾವಕ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಇಂದಲವಾಯಿ ಮಂಡಲದ ವೆಂಗಲ್ಪಾಡ್ನಲ್ಲಿ ನಡೆದಿದೆ. ಸ್ಥಳಿಯ ಶಾಸಕ ಬಾಜಿರೆಡ್ಡಿ ಗೋವರ್ಧನ್ ಭಾನುವಾರ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿದ ಬಳಿಕವೇ ಈ ಮನಕಲಕುವ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರೊಬ್ಬರು ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ.
ಇದನ್ನೂ ಓದಿ:ಹಾವೇರಿ: ವಾರದ ಹಿಂದೆ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಸಾರಿಗೆ ನೌಕರ ಡಿಪೋದಲ್ಲೇ ಆತ್ಮಹತ್ಯೆ
ಗ್ರಾಮದ ನಿವಾಸಿ ಮಲವತ್ ರೆಡ್ಡಿ (34) ಎಂಬಾತ ತನ್ನ ಮೂರು ವರ್ಷದ ಮಗ ನಿತಿನ್ ಜೊತೆ ಜೂನ್ 21 ರಂದು ಕಾರ್ಯ ನಿಮಿತ್ತ ಕಾಮರೆಡ್ಡಿ ಜಿಲ್ಲೆಯ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಶನಿವಾರ ರಾತ್ರಿ ದ್ವಿಚಕ್ರ ವಾಹನದಲ್ಲಿ ತಮ್ಮ ಮನೆಯತ್ತ ಹಿಂತಿರುಗುತ್ತಿದ್ದರು. ಆದರೆ, ಈ ವೇಳೆ ಸದಾಶಿವನಗರ ಮಂಡಲದ ಡಗ್ಗಿ ಎಂಬ ಅರಣ್ಯ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರಲ್ಲಿ ರಸ್ತೆ ಬದಿಯಲ್ಲಿದ್ದ ಬ್ಯಾರಿಕೇಡ್ಗೆ ಇವರ ಬೈಕ್ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ಮಗ ಇಬ್ಬರೂ ರಸ್ತೆ ಬದಿ ಹಾರಿ ಬಿದ್ದಿದ್ದಾರೆ. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಬಾಲಕನ ತಂದೆ ಮಲವತ್ ರೆಡ್ಡಿ ಸ್ಥಳದಲ್ಲೇ ಮೃತಪಟ್ಟಿದ್ದರು. ಇದನ್ನು ಅರಿಯದ ಬಾಲಕ, ತನ್ನ ತಂದೆಯನ್ನು ಎಬ್ಬಿಸಲು ಸಾಕಷ್ಟು ಪ್ರಯತ್ನ ಮಾಡಿದ್ದಾನೆ. ಸುತ್ತಲೂ ಕತ್ತಲಾಗಿದ್ದರಿಂದ ಹಾಗೂ ತಗ್ಗು ಪ್ರದೇಶ ಆಗಿದ್ದರಿಂದ ಇವರ ಬಳಿ ಯಾರೂ ತೆರಳಿರಲಿಲ್ಲ. ನನಗೆ ಹಸಿವಾಗಿದೆ, ಮನೆಗೆ ಹೋಗೋಣ ಏಳಪ್ಪ ಅಂತ ಅತ್ತು ಅತ್ತು ಸುಸ್ತಾದ ಬಳಿಕ ಬಾಲಕ ನಿತಿನ್, ತಂದೆಯ ಶವದ ಬಳಿಯೇ ನಿದ್ರೆಗೆ ಜಾರಿದ್ದಾನೆ.