ನವದೆಹಲಿ:ಇಲ್ಲಿ ನಿರ್ಮಾಣವಾಗಿರುವ ಹೊಸ ಸಂಸತ್ ಭವನ ನಾಳೆ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಟ್ಟಡವನ್ನು ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಭಾಗವಹಿಸುವ ಕಾರಣ ದೆಹಲಿಯಲ್ಲಿ ಸಂಚಾರ ನಿಯಮ ಹಾಕಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ನಾಳಿನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹಲವು ವಿವಿಐಪಿಗಳ ಸುಗಮ ಸಂಚಾರಕ್ಕೆ ವಿಶೇಷ ಸಂಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ನಗರದ ಹಲವು ಪ್ರದೇಶವನ್ನು ನಿಯಂತ್ರಿತ ವಲಯವಾಗಿ ಮಾರ್ಪಡಿಸಲಾಗಿದೆ. ಗಣ್ಯರಿಗೆ ಮಾತ್ರ ಆ ರಸ್ತೆಗಳ ಸಂಚಾರಕ್ಕೆ ಅನುಮತಿಸಲಾಗಿದೆ.
"ಮದರ್ ತೆರೇಸಾ ಕ್ರೆಸೆಂಟ್ ರಸ್ತೆ, ಟಾಲ್ಕಟೋರಾ, ಬಾಬಾ ಖರಕ್ ಸಿಂಗ್ ಮಾರ್ಗ, ಗೋಲ್ ದಕ್ ಖಾನಾ, ಅಶೋಕ್ ರಸ್ತೆ, ಪಟೇಲ್ ಚೌಕ್, ಅಶೋಕ್ ರಸ್ತೆ, ವಿಂಡ್ಸರ್ ಪ್ಲೇಸ್, ಜನಪಥ್, ಎಂಎಲ್ಎನ್ಪಿ, ಅಕ್ಬರ್ ರಸ್ತೆ, ಗೋಲ್ ಮೇಥಿ, ಜಿಕೆಪಿ, ತೀನ್ ಮೂರ್ತಿ ಮಾರ್ಗ, ತೀನ್ ಮೂರ್ತಿ ಸುತ್ತುವರಿದ ಪ್ರದೇಶ ಮತ್ತು ಮದರ್ ತೆರೇಸಾ ಕ್ರೆಸೆಂಟ್ ರಸ್ತೆಯನ್ನು ನಿಯಂತ್ರಿತ ಪ್ರದೇಶವನ್ನಾಗಿ ಮಾಡಲಾಗಿದೆ. ಸಾಮಾನ್ಯರಿಗೆ ಈ ಮಾರ್ಗಗಳ ಸಂಚಾರವನ್ನು ನಿಷೇಧಿಸಲಾಗಿದೆ. ಸ್ಥಳೀಯ ನಿವಾಸಿಗಳು, ಗುರುತಿಸಿದ ಮತ್ತು ತುರ್ತು ವಾಹನಗಳು ಮಾತ್ರ ಈ ಪ್ರದೇಶದೊಳಗೆ ಚಲಿಸಲು ಅನುಮತಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಈ ಮಾರ್ಗ ಬಳಕೆದಾರರು ತಮ್ಮ ಪ್ರಯಾಣವನ್ನು ಮುಂಚಿತವಾಗಿ ಯೋಜಿಸಬೇಕು. ಬೆಳಗ್ಗೆ 5.30 ರಿಂದ ಮಧ್ಯಾಹ್ನ 3 ರವರೆಗೆ ಸಾಮಾನ್ಯರಿಗೆ ಈ ಮಾರ್ಗಗಳು ಬಂದ್ ಆಗಿರಲಿವೆ. ಸಾರ್ವಜನಿಕರು ಮತ್ತು ವಾಹನ ಚಾಲಕರು ಇದಕ್ಕೆ ಸಹಕರಿಸಬೇಕು ಎಂದು ಟ್ರಾಫಿಕ್ ಪೊಲೀಸರು ಕೋರಿದ್ದಾರೆ.
ಇದನ್ನೂ ಓದಿ:ಸೆಂಗೋಲ್ 'ವಾಕಿಂಗ್ ಸ್ಟಿಕ್': ಕಾಂಗ್ರೆಸ್ ತಮಿಳಿಗರ ಕ್ಷಮೆ ಕೋರಲು ಅಣ್ಣಾಮಲೈ ಆಗ್ರಹ