ಶಹಜಹಾನ್‌ಪುರ (ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಶಹಜಹಾನ್‌ಪುರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಸೇತುವೆಯಿಂದ ನದಿಗೆ ಬಿದ್ದು 21 ಮಂದಿ ದುರ್ಮರಣ ಹೊಂದಿದ್ದಾರೆ. ಮೃತರಲ್ಲಿ ಮಹಿಳೆಯರು, ಮಕ್ಕಳು ಸೇರಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಇಲ್ಲಿನ ತಿಲ್ಹಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿರ್ಸಿಂಗ್ ಗ್ರಾಮದ ಬಳಿಯ ನದಿ ಸಮೀಪ ಈ ಅಪಘಾತ ನಡೆದಿದೆ. ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಸುಮಾರು 41 ಮಂದಿ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಘಟನೆ ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಹಾರ ಕಾರ್ಯದಲ್ಲಿ ಆರಂಭಿಸಿದ್ದಾರೆ.
ಈ ಘಟನೆ ಬಗ್ಗೆ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದು, ಶಹಜಹಾನ್‌ಪುರ ಜಿಲ್ಲೆಯ ಗರ್ರಾ ನದಿ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಸಿಎಂ ಸೂಚನೆ ಮೇರೆಗೆ ಜಿಲ್ಲಾಡಳಿತ, ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ಆಗಮಿಸಿ ಪರಿಹಾರ ಕಾರ್ಯದಲ್ಲಿ ತೊಡಗಿವೆ. ಉನ್ನತ ಆಡಳಿತದ ಎಲ್ಲ ಅಧಿಕಾರಿಗಳು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ನೀರು ತೆಗೆದುಕೊಂಡು ಹೋಗಲು ಬಂದಿದ್ದ ಗ್ರಾಮಸ್ಥರು:ಮೃತರನ್ನು ಅಜ್ಮತ್‌ಪುರ ಗ್ರಾಮಕ್ಕೆ ಸೇರಿದವರು ಎಂದು ತಿಳಿದು ಬಂದಿದೆ. ಇವರು ''ಭಗವತ್ ಕಥಾ''ಕ್ಕೆ ನೀರು ತರಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮೃತರ ಸಂಬಂಧಿಕರಿಗೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುವುದಾಗಿ ಸಿಎಂ ಯೋಗಿ ಘೋಷಿಸಿದ್ದಾರೆ.