ಆಗ್ರಾ: ತಾಜ್‌ಮಹಲ್‌ನಲ್ಲಿ ಜನಸಂದಣಿ ನಿಯಂತ್ರಣಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಾಲ್ಕು ವರ್ಷಗಳ ಹಿಂದೆ ಸ್ಟೆಪ್ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದರ ಅಡಿಯಲ್ಲಿ, ತಾಜ್ ಮಹಲ್‌ನ ಮುಖ್ಯ ಸಮಾಧಿಗೆ ಭೇಟಿ ನೀಡಬೇಕಾದರೆ 200 ರೂ.ಗಳ ಪ್ರತ್ಯೇಕ ಟಿಕೆಟ್ ಅನ್ನು ವಿಧಿಸಲಾಯಿತು. ಇದರಿಂದಾಗಿ ಪ್ರವಾಸಿಗರು ಮುಖ್ಯ ಸಮಾಧಿಗೆ ಭೇಟಿ ನೀಡಲು ಹಿಂಜರಿಯಲಾರಂಭಿಸಿದರು. ಸ್ಟೆಪ್ ಟಿಕೆಟಿಂಗ್ ಆರಂಭವಾದ ನಂತರ ಮುಖ್ಯ ಸಮಾಧಿಗೆ ಭೇಟಿ ನೀಡುವವರ ಸಂಖ್ಯೆ ಮೂರನೇ ಒಂದರಷ್ಟು ಕಡಿಮೆಯಾಗಿದೆ. ಅಷ್ಟೇ ಅಲ್ಲದೆ ತಾಜ್ ಮಹಲ್‌ಗೆ ಭೇಟಿ ನೀಡುವ ಪ್ರವಾಸಿಗರು ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿ ಟಿಕೆಟ್ ಖರೀದಿಸಲು ಆಸಕ್ತಿ ತೋರಿಸುತ್ತಿದ್ದಾರೆ. ಆರ್‌ಟಿಐ ಅರ್ಜಿಯೊಂದರ ಮೂಲಕ ಈ ಎಲ್ಲ ಮಾಹಿತಿಗಳು ಬಹಿರಂಗವಾಗಿವೆ. ಇದರಿಂದಾಗಿ ತಾಜ್ ಮಹಲ್ ಮತ್ತಿತರ ಸ್ಮಾರಕಗಳಲ್ಲಿ ಆನ್ ಲೈನ್ ಟಿಕೆಟ್ ವ್ಯವಸ್ಥೆ ಇನ್ನಷ್ಟು ಸುಧಾರಿಸುವಂತೆ ಬೇಡಿಕೆ ವ್ಯಕ್ತವಾಗಿದೆ. ದೇಶಿ ಮತ್ತು ವಿದೇಶಿ ಪ್ರವಾಸಿಗರು ಟಿಕೆಟ್‌ಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಎದುರಿಸದಂತೆ ಕ್ರಮ ತೆಗೆದುಕೊಳ್ಳುವಂತೆ ಜನ ಆಗ್ರಹಿಸುತ್ತಿದ್ದಾರೆ.
ತಾಜ್ ಮಹಲ್ ನಲ್ಲಿ ತುಂಬಾ ಜನದಟ್ಟಣೆ ಉಂಟಾಗುವ ಕಾರಣದಿಂದ ಇಲ್ಲಿನ ಆಡಳಿತ ವ್ಯವಸ್ಥೆಯ ಕುರಿತು ಅನೇಕ ಪ್ರಶ್ನೆಗಳು ಮೂಡಿದ್ದವು. ಅಲ್ಲದೆ ಮುಖ್ಯ ಸಮಾಧಿಯನ್ನು ವೀಕ್ಷಿಸಲು ತುಂಬಾ ಜನ ಸರತಿ ಸಾಲಿನಲ್ಲಿ ನಿಂತಿರುತ್ತಿದ್ದರು. ಇದರ ಬಗ್ಗೆ ಗಮನಹರಿಸಿದ ಎಎಸ್‌ಐ. 2018 ರ ಡಿಸೆಂಬರ್ 12 ರಿಂದ ತಾಜ್ ಮಹಲ್‌ನ ಮುಖ್ಯ ಸಮಾಧಿಯನ್ನು ನೋಡಲು 200 ರೂಪಾಯಿಗಳ ಹೆಚ್ಚುವರಿ ಟಿಕೆಟ್ ಖರೀದಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿತು. ಅಂದಿನಿಂದ ದೇಶೀಯ ಮತ್ತು ವಿದೇಶಿ ಪ್ರವಾಸಿಗರು ಮುಖ್ಯ ಸಮಾಧಿ ನೋಡಬೇಕಾದರೆ 200 ರೂಪಾಯಿಗಳ ಹೆಚ್ಚುವರಿ ಟಿಕೆಟ್ ಖರೀದಿಸುವುದು ಕಡ್ಡಾಯ.
ಆಗ್ರಾ ಡೆವಲಪ್‌ಮೆಂಟ್ ಫೌಂಡೇಶನ್‌ನ ಕಾರ್ಯದರ್ಶಿ ಅಡ್ವೊಕೇಟ್ ಕೆಸಿ ಜೈನ್ ಅವರು ಆರ್‌ಟಿಐ ಅರ್ಜಿಯ ಮೂಲಕ ಎಎಸ್‌ಐನಿಂದ ತಾಜ್ ಮಹಲ್‌ನ ಆನ್‌ಲೈನ್ ಮತ್ತು ಆಫ್‌ಲೈನ್ ಟಿಕೆಟ್‌ಗಳ ಬಗ್ಗೆ ಮಾಹಿತಿ ಕೇಳಿದ್ದರು. ತಾಜ್ ಮಹಲ್‌ಗೆ ಭೇಟಿ ನೀಡುವ ಸರಾಸರಿ 4 ಪ್ರವಾಸಿಗರಲ್ಲಿ ಒಬ್ಬ ಪ್ರವಾಸಿಗ ಮಾತ್ರ ಮುಖ್ಯ ಸಮಾಧಿಗೆ ಟಿಕೆಟ್ ಖರೀದಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಉಳಿದ ಮೂವರು ಪ್ರವಾಸಿಗರು ಮುಖ್ಯ ಸಮಾಧಿಗೆ ಹೋಗುತ್ತಿಲ್ಲ.
ಅಂದರೆ ಶೇ 75ರಷ್ಟು ಪ್ರವಾಸಿಗರು ಎಎಸ್‌ಐನ ಸ್ಟೆಪ್ ಟಿಕೆಟಿಂಗ್‌ನ ದುಬಾರಿ ವೆಚ್ಚದಿಂದಾಗಿ ಟಿಕೆಟ್ ಖರೀದಿಸುತ್ತಿಲ್ಲ. ಪ್ರತಿದಿನ 75 ಪ್ರವಾಸಿಗರು ಮುಖ್ಯ ಸಮಾಧಿಯನ್ನು ನೋಡದೆ ಹಿಂತಿರುಗುತ್ತಾರೆ. ಏಕೆಂದರೆ ತಾಜ್ ಮಹಲ್ ಸಂಕೀರ್ಣದಲ್ಲಿ ಭಾರತೀಯ ಪ್ರವಾಸಿಗರಿಗೆ ಪ್ರವೇಶ ಟಿಕೆಟ್ ದರ 50 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರಿಗೆ ಟಿಕೆಟ್ ದರ 1100 ರೂಪಾಯಿಗಳಾಗಿದೆ. ಸ್ಟೆಪ್ ಟಿಕೆಟ್ ವ್ಯವಸ್ಥೆಯಿಂದಾಗಿ ಮುಖ್ಯ ಸಮಾಧಿಗೆ ಹೋಗಲು 200 ರೂಪಾಯಿ ಹೆಚ್ಚುವರಿ ಟಿಕೆಟ್ ತೆಗೆದುಕೊಳ್ಳಬೇಕಾಗಿದೆ.