ತಂಜಾವೂರು (ತಮಿಳುನಾಡು): ಕೇರಳದ ಪ್ರವಾಸಿ ಬಸ್ವೊಂದು ಅಪಘಾತಕ್ಕೀಡಾದ ಘಟನೆ ತಮಿಳುನಾಡಿನ ತಂಜಾವೂರು ಸಮೀಪ ಭಾನುವಾರ ನಡೆದಿದೆ. ಈ ಘಟನೆಯಲ್ಲಿ ಓರ್ವ ಬಾಲಕ ಸೇರಿ ನಾಲ್ವರು ಮೃತಪಟ್ಟಿದ್ದಾರೆ. ಸುಮಾರು 38 ಮಂದಿ ಗಾಯಗೊಂಡಿದ್ದಾರೆ.
ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ವೆಲಂಕನ್ನಿ ಚರ್ಚ್‌ಗೆ ಭೇಟಿ ನೀಡಲೆಂದು ಕೇರಳದ ತ್ರಿಶೂರ್ ಜಿಲ್ಲೆಯ ಒಲ್ಲೂರು ಮೂಲದ 51 ಜನರು ಐಷಾರಾಮಿ ಟೂರಿಸ್ಟ್ ಬಸ್‌ನಲ್ಲಿ ಬರುತ್ತಿದ್ದರು. ತ್ರಿಶೂರ್ನಿಂದ ಹೊರಟಿದ್ದ ಬಸ್ ಬೆಳಗಿನ ಜಾವ ತಂಜಾವೂರು ಸಮೀಪದ ಒರತನಾಡು - ಮನ್ನಾರಗುಡಿ ರಸ್ತೆಯ ತಿರುವಿನಲ್ಲಿ ಪಲ್ಟಿ ಹೊಡೆದಿದೆ. ಪರಿಣಾಮ ಬಸ್‌ನಲ್ಲಿ ವೃದ್ಧೆ ಲಿಲಿ (63) ಮತ್ತು ಬಾಲಕ ರೇಯಾನ್ (8) ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಲ್ಲದೇ, ಸುಮಾರು 38 ಮಂದಿ ಗಾಯಗೊಂಡಿದ್ದು, ಇದರಲ್ಲಿ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳು ಆಗಿವೆ. ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಡಿಎಸ್ಪಿ ಪ್ರಸನ್ನ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಅನ್ಬಜಗನ್ ನೇತೃತ್ವದಲ್ಲಿ ಪರಿಹಾರ ಕಾರ್ಯ ಕೈಗೊಂಡಿದ್ದಾರೆ. ಗಾಯಾಳುಗಳು ಮತ್ತು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಒರ್ದನಾಡು ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ತಂಜಾವೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಿದ್ದಾರೆ. ಆಸ್ಪತ್ರೆಯಲ್ಲಿ ಮತ್ತಿಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.
ಈ ಘಟನೆಯಿಂದ ಒರತನಾಡು-ಮನ್ನಾರಗುಡಿ ರಸ್ತೆಯಲ್ಲಿ ಸುಮಾರು 3 ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಚಾಲಕ ನಿದ್ರೆಗೆ ಜಾರಿದ್ದ ಕಾರಣ ಬಸ್ ಅಪಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.