ಡೆಹ್ರಾಡೂನ್(ಉತ್ತರಾಖಂಡ):ಪ್ರಸಿದ್ಧ ಧಾಮಗಳಲ್ಲಿ ಒಂದಾಗಿರುವ ಕೇದಾರನಾಥ ದೇಗುಲದ ಗರ್ಭಗುಡಿಗೆ ಚಿನ್ನದ ಲೇಪನದಲ್ಲಿ ದೊಡ್ಡ ಹಗರಣ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಕಿತ್ತಾಟಕ್ಕೆ ಕಾರಣವಾಗಿದೆ. ಈ ಕುರಿತಂತೆ ಅಲ್ಲಿನ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಸೂಚಿಸಿದೆ. ಆದರೆ, ಇದನ್ನು ಕಾಂಗ್ರೆಸ್ ಆಕ್ಷೇಪಿಸಿದ್ದು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದೆ.
ವಿವಾದ ತೀವ್ರತೆ ಪಡೆದ ಕಾರಣ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ನೀಡಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ತನಿಖೆಯ ನೈಜತೆಯ ಬಗ್ಗೆ ಅನುಮಾನಿಸಿದ್ದು, ಕೇದಾರನಾಥ ದೇಗುಲದ ಚಿನ್ನದ ಲೇಪಿತ ಗರ್ಭಗುಡಿ ಕೇಸ್ನ ತನಿಖೆಯನ್ನು ಹಾಲಿ ನ್ಯಾಯಮೂರ್ತಿಗಳ ಸಮ್ಮುಖದಲ್ಲಿ ನಡೆಸಬೇಕು ಎಂದು ಆಗ್ರಹಿಸಿದೆ.
ಕಳೆದ ವರ್ಷ ಕೇದಾರನಾಥನ ಗರ್ಭಗುಡಿಯನ್ನು ಚಿನ್ನದಿಂದ ಅಲಂಕರಿಸಲಾಗಿದೆ. ಆದರೆ, ಚಿನ್ನದಲ್ಲಿ ಹಿತ್ತಾಳೆಯನ್ನು ಹೆಚ್ಚಾಗಿ ಬಳಸಲಾಗಿದೆ. ಬಂಗಾರದ ಹೆಸರಲ್ಲಿ ಹಣ ಲೂಟಿ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ. ಇದಲ್ಲದೇ ಚಿನ್ನದ ಲೇಪನವನ್ನು ಕಳವು ಮಾಡಲಾಗಿದೆ. ಈ ಬಗ್ಗೆ ಕೇದಾರ - ಬದರಿನಾಥ ಸಮಿತಿ ಸ್ಪಷ್ಟನೆ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಮೊದಲು ಎಸ್‌ಐಟಿ ತನಿಖೆಗೆ ಕೈ ಪಕ್ಷ ಆಗ್ರಹಿಸಿತ್ತು. ಇದು ಭಕ್ತರ ನಂಬಿಕೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿತ್ತು.
ತನಿಖೆಗೆ ಆದೇಶ:ವಿವಾದ ತೀವ್ರತೆ ಪಡೆದುಕೊಂಡ ಕಾರಣ ಪ್ರವಾಸೋದ್ಯಮ ಸಚಿವ ಸತ್ಪಾಲ್ ಮಹಾರಾಜ್ ಅವರು, ಕಾರ್ಯದರ್ಶಿ ಧರ್ಮಸ್ಯ ಹರೀಶ್ ಚಂದ್ರ ಸೆಮ್ವಾಲ್ ಅವರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಧಾರ್ಮಿಕ ನಂಬಿಕೆಯ ಜೊತೆ ಆಟ ಆಡುವವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ. ಚಿನ್ನದ ಲೇಪನ ಕಳುವು ಆರೋಪ ಕುರಿತಂತೆ ಶೀಘ್ರ ತನಿಖೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ. ಮತ್ತೊಂದೆಡೆ, ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಪ್ರಕರಣವನ್ನು ಹಾಲಿ ನ್ಯಾಯಾಧೀಶರಿಂದಲೇ ನಡೆಸುವಂತೆ ಆಗ್ರಹಿಸುತ್ತಿದೆ.
ಕಾಂಗ್ರೆಸ್ ರಾಜ್ಯಾಧ್ಯಕ್ಷ ಕರಣ್ ಮಹಾರಾ ಮಾತನಾಡಿ, ಪ್ರಕರಣದ ಬಗ್ಗೆ ತನಿಖೆಗೆ ಸರ್ಕಾರದ ಮೇಲೆ ತೀವ್ರ ಒತ್ತಡವಿದೆ. ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆದಲ್ಲಿ ನಿಷ್ಪಕ್ಷಪಾತ ಫಲಿತಾಂಶ ಸಾಧ್ಯವಿಲ್ಲ. ಹೀಗಾಗಿ ನ್ಯಾಯಾಂಗದಿಂದಲೇ ತನಿಖೆಯಾಗಲಿ. ಬದರಿ - ಕೇದಾರ ದೇವಸ್ಥಾನ ಸಮಿತಿ ಅಧ್ಯಕ್ಷ ಅಜೇಂದ್ರ ಅಜಯ್ ಅವರು ಮೊದಲು ದೇವಸ್ಥಾನಕ್ಕೆ 230 ಕೆ.ಜಿ. ಚಿನ್ನ ಬಳಸಲಾಗಿದೆ ಎಂದು ಹೇಳಿದ್ದರು. ಈಗ ಉಲ್ಟಾ ಹೊಡೆದಿದ್ದು, ಬರೀ 23 ಕೆಜಿ ಎನ್ನುತ್ತಿದ್ದಾರೆ. ನೂರಾರು ಕೆಜಿ ಹಗರಣ ನಡೆದಿರುವ ಅನುಮಾನವಿದೆ ಎಂದು ಆರೋಪಿಸಿದರು.
ಸಮಿತಿ ಅಧಿಕಾರಿಗಳಲ್ಲದೇ, ದಾನಿ ವಿರುದ್ಧವೂ ತೆರಿಗೆ ಇಲಾಖೆ ತನಿಖೆ ನಡೆಸಬೇಕು. ಕಾರಣ ದಾನಿಗಳು ತಮ್ಮ ಆದಾಯದ ಮೇಲಿನ ತೆರಿಗೆಯನ್ನು ಉಳಿಸಲು ಇಂತಹ ದಾನಕ್ಕೆ ಕೈ ಹಾಕುತ್ತಿದ್ದಾರೆ. ಅದನ್ನು ತಡೆಯಲು ಮೊದಲು ದಾನಿಗಳ ಮೇಲೆಯೆ ದಾಳಿ ನಡೆಸಬೇಕು. ಆಗ ದಾನ ಮತ್ತು ಚಿನ್ನದ ಹಗರಣ ಬಯಲಾಗಲಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ;ಕೇದಾರನಾಥನ ಗರ್ಭಗುಡಿಗೆ ಚಿನ್ನದ ಲೇಪನ; ವಿಶೇಷ ಅಲಂಕಾರ ಕಾರ್ಯ ಪೂರ್ಣ