ಮುಂಬೈ:ಲೈಂಗಿಕ ಉದ್ದೇಶವಿಲ್ಲದೆ ಮಗುವಿನ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ ಎಂದು ಬಾಂಬೆ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಎಂಟು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಬಂಧಿತನಾಗಿದ್ದ 46 ವರ್ಷದ ವ್ಯಕ್ತಿಗೆ ಜಾಮೀನು ನೀಡುವಾಗ ನ್ಯಾಯಮೂರ್ತಿ ಸಂದೀಪ್ ಶಿಂಧೆಯವರಿದ್ದ ಏಕಸದಸ್ಯ ಪೀಠ ಈ ರೀತಿ ಹೇಳಿತು.
ಲೈಂಗಿಕ ಅಪರಾಧಗಳಿಂದ ‘ಮಕ್ಕಳ ರಕ್ಷಣಾ ಕಾಯಿದೆಯ ಸೆಕ್ಷನ್ 7’ ರ ಅಡಿ, ಲೈಂಗಿಕ ಉದ್ದೇಶವಿಲ್ಲದೆ ಮಕ್ಕಳ ಕೆನ್ನೆಗಳನ್ನು ಮುಟ್ಟುವುದು ಅಪರಾಧವಲ್ಲ ಎಂದು ನ್ಯಾಯಾಲಯ ತಿಳಿಸಿದೆ. ವ್ಯಕ್ತಿಯು ಲೈಂಗಿಕ ಉದ್ದೇಶದಿಂದ ಬಾಲಕಿಯ ಕೆನ್ನೆ ಮುಟ್ಟಿಲ್ಲ ಎಂದು ವಿಚಾರಣೆಯಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆತನಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಪ್ರಕರಣದಲ್ಲಿ ವ್ಯಕ್ತಿಗೆ ಜಾಮೀನು ನೀಡುವ ವೇಳೆ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಇತರೆ ವಿಚಾರಗಳಿಗೆ ಈ ಅಭಿಪ್ರಾಯ ಅನ್ವಯಿಸಲ್ಲ ಎಂದು ಇದೇ ವೇಳೆ ಕೋರ್ಟ್ ಸ್ಪಷ್ಟಪಡಿಸಿದೆ.