ನವದೆಹಲಿ:ದಿಢೀರ್ ಎಂದು ದೇಶದಲ್ಲಿ ಕೋವಿಡ್ ಸಾವು-ನೋವಿನ ಪ್ರಮಾಣ ಹೆಚ್ಚಾಗಿದ್ದು, ಅನೇಕ ನಗರಗಳಲ್ಲಿ ಲಾಕ್ಡೌನ್ ಭಯ ಶುರುವಾಗಿದೆ. ಬುಧವಾರ ಒಂದೇ ದಿನ ಬರೋಬ್ಬರಿ 72,330 ಸೋಂಕಿತರು ಪತ್ತೆಯಾಗಿದ್ದರೆ, 459 ಮಂದಿ ವೈರಸ್ಗೆ ಬಲಿಯಾಗಿದ್ದಾರೆ.
ಭಾರತದಲ್ಲೀಗ ಕೊರೊನಾ ಕೇಸ್ಗಳ ಸಂಖ್ಯೆ 1,22,21,665 ಹಾಗೂ ಮೃತರ ಸಂಖ್ಯೆ 1,62,927ಕ್ಕೆ ಏರಿಕೆಯಾಗಿದೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ ಕೂಡ 5,84,055ಕ್ಕೆ ಹೆಚ್ಚಳವಾಗಿದೆ. ಒಟ್ಟು ಸೋಂಕಿತರ ಪೈಕಿ 1,14,74,683 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ
ಈವರೆಗೆ ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು, 60 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೇರಿ ಒಟ್ಟು 6,51,17,896 ಮಂದಿಗೆ ಲಸಿಕೆ ನೀಡಲಾಗಿತ್ತು. ಇಂದಿನಿಂದ 45 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ನೀಡಲಾಗುವುದು. ಅರ್ಹ ಫಲಾನುಭವಿಗಳು ತಮ್ಮ ಸರದಿ ಬಂದಾಗ ವ್ಯಾಕ್ಸಿನ್ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ತಿಳಿಸಿದೆ.
ಕೋವಿಡ್ ಟೆಸ್ಟಿಂಗ್ ಅಪ್ಡೇಟ್ಸ್
ಇನ್ನು ಮಾರ್ಚ್ 1ರ ವರೆಗೆ 24 ಕೋಟಿಗೂ ಹೆಚ್ಚು 24,47,98,621 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,25,681 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.