ಜಬಲ್ಪುರ್ (ಮಧ್ಯಪ್ರದೇಶ): ಕೊರೊನಾ ಮಹಾಮಾರಿ ರೋಗವು ಶಿಕ್ಷಣ ಕ್ಷೇತ್ರದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರಿದೆ. ಬಹುಪಾಲು ಮಕ್ಕಳ ಎರಡು ವರ್ಷಗಳ ಮೌಲ್ಯಯುತ ಶಿಕ್ಷಣವನ್ನೇ ಕಸಿದುಕೊಂಡಿದೆ. ಆದರೆ, ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ಶಿಕ್ಷಕರೊಬ್ಬರು ಕೊರೊನಾ ಸೋಂಕಿನ ಹಾವಳಿಯ ನಡುವೆ ವಿನೂತನ ಪ್ರಯೋಗದ ಮೂಲಕ ಗಮನ ಸೆಳೆದಿದ್ದಾರೆ.
ಕೊರೊನಾ ಕಾರಣದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ವಠಾರ ಶಾಲೆಗಳನ್ನು ನಡೆಸಲಾಗುತ್ತಿತ್ತು. ಆದರೂ, ಈ ಶಾಲೆಗಳಿಗೆ ಹೆಚ್ಚಿನ ಮಕ್ಕಳು ಬರುತ್ತಿರಲಿಲ್ಲ. ಇದರಿಂದ ಜಬಲ್ಪುರ್ ಜಿಲ್ಲೆಯ ಧರ್ಮಾಪುರ ಗ್ರಾಮದ ಸರ್ಕಾರಿ ಶಿಕ್ಷಕ ದಿನೇಶ್ಕುಮಾರ್ ಮಿಶ್ರಾ ಹೊಸ ಉಪಾಯ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಗ್ರಾಮದಲ್ಲಿ ಗೋಡೆ ಬರಹಗಳನ್ನು ಬಿಡಿಸಿ, ಮಕ್ಕಳು ಎಲ್ಲೇ ಇದ್ದರೂ ಕಲಿಕೆಯಲ್ಲಿ ತೊಡಗುವಂತೆ ಮಾಡಿದ್ದಾರೆ.
ಇಡೀ ಗ್ರಾಮದ ಗೋಡೆಗಳಿಗೆ ಚಿತ್ರಬರಹ: ಶಾಲಾ ಕಟ್ಟಡದ ಗೋಡೆಗಳು ಮಾತ್ರವಲ್ಲದೇ, ಇಡೀ ಗ್ರಾಮದ ಗೋಡೆಗಳ ಮೇಲೆಯೂ ಚಿತ್ರ ಬರಹ ಮತ್ತು ಗಣಿತ, ವಿಜ್ಞಾನ ಮತ್ತು ಕಲಿಕೆಗೆ ಸಂಬಂಧಿಸಿದ ವಿವಿಧ ಆಕೃತಿಗಳ ಬರಹವನ್ನು ಬರೆಸಿದ್ದಾರೆ. ಗ್ರಾಮದ ಯಾವುದೇ ಬದಿಗೆ ಹೋದರೂ ಚಿತ್ರ ಬರಹಗಳೇ ಕಾಣಿಸುತ್ತಿವೆ. ಇದರಿಂದ ಇಡೀ ಧರ್ಮಾಪುರ ಗ್ರಾಮದ ಚಿತ್ರಣವೇ ಬದಲಾಗಿದ್ದು, ಶಿಕ್ಷಣ ಕೇಂದ್ರವಾಗಿ ಮಾರ್ಪಟ್ಟಿದೆ.