ಶ್ರೀನಗರ(ಜಮ್ಮು-ಕಾಶ್ಮೀರ):ಜಮ್ಮು-ಕಾಶ್ಮೀರದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆ ಪಾಕಿಸ್ತಾನದ ಎಲ್‌ಇಟಿ ಭಯೋತ್ಪಾದಕ ಸಂಘಟನೆಯ ಪ್ರಮುಖ ಕಮಾಂಡರ್‌ನನ್ನು ಹೊಡೆದುರುಳಿಸಿದೆ. ಶ್ರೀನಗರದ ಹೊರವಲಯ ಹರ್ವಾನ್ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಗ್ರನ ಹತ್ಯೆ ಮಾಡಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಪೊಲೀಸರು ಟ್ವೀಟ್ ಮಾಡಿದ್ದು, ಉಗ್ರ ಸಲೀಮ್ ಪರೆಯ್ನನ್ನು ಹತ್ಯೆ ಮಾಡಲಾಗಿದೆ. ಇದೇ ವೇಳೆ, ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದೆ.
ಕಣಿವೆ ನಾಡಿನಲ್ಲಿ ಕಳೆದ ಕೆಲವು ವರ್ಷಗಳಿಂದ ಉಗ್ರ ಚಟುವಟಿಕೆಗಳಿಗೆ ಸಲೀಮ್ ಪರೆಯ್ ಕುಮ್ಮಕ್ಕು ನೀಡುತ್ತಿದ್ದನು. ಈ ಹಿಂದೆ ಎರಡು ಸಲ ಈತನ ಬಂಧನ ಮಾಡಿದ್ದ ಪೊಲೀಸರು ತದನಂತರ ಬಿಡುಗಡೆ ಮಾಡಿದ್ದರು. ಆದರೆ, ಇದೀಗ ಆತನನ್ನು ಹೊಡೆದುರುಳಿಸಿದ್ದಾರೆ.
ಇದನ್ನೂ ಓದಿ:ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ: ಒಂದೇ ಕುಟುಂಬದ ಮೂವರ ದುರ್ಮರಣ
2017ರಲ್ಲಿ ಉತ್ತರ ಕಾಶ್ಮೀರದ ಬಂಡಿಪೋರಾದಲ್ಲಿ ಕೆಲ ಸ್ಥಳೀಯರ ಶಿರಚ್ಛೇದ ಮಾಡಿ ಭಯೋತ್ಪಾದನೆಗೆ ಈತ ಪ್ರೇರೇಪಣೆ ನೀಡಿದ್ದ ಎಂದು ತಿಳಿದು ಬಂದಿತ್ತು. ಕಳೆದ ವರ್ಷ ಜಮ್ಮು-ಕಾಶ್ಮೀರ ಬಿಡುಗಡೆ ಮಾಡಿದ್ದ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿ ಈತನ ಹೆಸರಿತ್ತು. ಶ್ರೀನಗರದ ಗಸು ಪ್ರದೇಶದಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಅಪರಿಚಿತ ಉಗ್ರನ ಗುಂಡಿಕ್ಕಿ ಕೊಂದು ಹಾಕಿವೆ.