ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಉನ್ನತ ರಾಷ್ಟ್ರೀಯ ಭದ್ರತಾ ಸಲಹೆಗಾರ ಮಹತ್ವದ ಭಾರತ ಭೇಟಿಗೆ ಆಗಮಿಸಿದ್ದಾರೆ. ಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಆ್ಯಂಡ್ ಎಮರ್ಜಿಂಗ್ ಟೆಕ್ನಾಲಜಿ (ಐಸಿಇಟಿ) ಸೇರಿದಂತೆ ವಿವಿಧ ದ್ವಿಪಕ್ಷೀಯ ವಿಷಯಗಳ ಬಗ್ಗೆ ಭಾರತದ ಹಿರಿಯ ಅಧಿಕಾರಿಗಳೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ.
ಅಮೆರಿಕದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಅವರನ್ನು ಹತ್ಯೆ ಮಾಡಲು ಭಾರತೀಯ ಅಧಿಕಾರಿಗಳು ಸಂಚು ರೂಪಿಸಿದ್ದಾರೆ ಎಂದು ಅಮೆರಿಕದ ಪ್ರಾಸಿಕ್ಯೂಟರ್ಗಳು ಆರೋಪಿಸಿದ ಕೆಲವೇ ದಿನಗಳ ನಂತರ ಜೋ ಬೈಡನ್ ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೊನಾಥನ್ ಫೈನರ್ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ವಿಕ್ರಮ್ ಮಿಸ್ರಿ ಅವರೊಂದಿಗೆ ಡಿಸೆಂಬರ್ 4 ರಂದು ನಡೆದ ಯುಎಸ್-ಇಂಡಿಯಾ ಇನಿಶಿಯೇಟಿವ್ ಆನ್ ಕ್ರಿಟಿಕಲ್ ಆ್ಯಂಡ್ ಎಮರ್ಜಿಂಗ್ ಟೆಕ್ನಾಲಜಿಯ (ಐಸಿಇಟಿ) ಮಧ್ಯಂತರ ಪರಿಶೀಲನಾ ನಿಯೋಗದ ನೇತೃತ್ವ ವಹಿಸಿದ್ದರು.
ಐಸಿಇಟಿ ಇದು ಯುಎಸ್-ಭಾರತ ಪಾಲುದಾರಿಕೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ. ಇದನ್ನು ಕಾರ್ಯತಂತ್ರದ ಭದ್ರತೆ ಮತ್ತು ತಂತ್ರಜ್ಞಾನ ಸಹಕಾರಕ್ಕೆ ಸಂಬಂಧಿಸಿದ್ದಾಗಿದೆ ಎಂದು ಶ್ವೇತಭವನ ಸೋಮವಾರ ತಿಳಿಸಿದೆ. ಮೇ 2022ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಬೈಡೆನ್ ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ಫಲಿತಾಂಶ ಆಧಾರಿತ ಸಹಕಾರವನ್ನು ಸುಗಮಗೊಳಿಸಲು ಐಸಿಇಟಿಯನ್ನು ಪ್ರಾರಂಭಿಸಿದ್ದರು. ಐಸಿಇಟಿಯನ್ನು ಭಾರತದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಎನ್ಎಸ್ಸಿಎಸ್) ಮತ್ತು ಯುಎಸ್ ರಾಷ್ಟ್ರೀಯ ಭದ್ರತಾ ಮಂಡಳಿ (ಎನ್ಎಸ್ಸಿ) ಜಂಟಿಯಾಗಿ ಮುನ್ನಡೆಸುತ್ತವೆ.