ನವದೆಹಲಿ: ಭಾರತೀಯ ಸೇನೆಯ ಉನ್ನತ ಕಮಾಂಡರ್‌ಗಳ ನಾಲ್ಕು ದಿನಗಳ ದ್ವೈವಾರ್ಷಿಕ ಸಮಾವೇಶ ಇಂದಿನಿಂದ ನವದೆಹಲಿಯಲ್ಲಿ ಆರಂಭವಾಗಲಿದೆ. ಸೇನೆಯ ಸಂಪನ್ಮೂಲಗಳ ಪರಿಣಾಮಕಾರಿ ಬಳಕೆ, ಕಾರ್ಯಾಚರಣೆ ಸಾಮರ್ಥ್ಯ ವೃದ್ಧಿಯ ಚರ್ಚೆ ಮತ್ತು ಸೇನೆಯ ಪ್ರಮುಖ ನೀತಿ ನಿರ್ಧಾರಗಳ ಬಗ್ಗೆ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ.
ಸಮಾವೇಶದಲ್ಲಿ ಸೇನೆಯ ಉನ್ನತ ಅಧಿಕಾರಿಗಳು, ಸೇನಾ ಕಮಾಂಡರ್‌ಗಳು, ಸೇನಾ ಮುಖ್ಯ ಕಚೇರಿಯ ಸಿಬ್ಬಂದಿ ವಿಭಾಗದ ಮುಖ್ಯಾಧಿಕಾರಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಸೇನೆಯ ಕುರಿತು ಆಂತರಿಕ ಸಮಿತಿ ಮಾಡಿರುವ ಶಿಫಾರಸುಗಳ ಕುರಿತು ಈ ಸಮಾವೇಶದಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.
ಸಮಾವೇಶದ ಮೊದಲ ದಿನ ಮಾನವ ಸಂಪನ್ಮೂಲ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮಾವೇಶ ಉದ್ದೇಶಿಸಿ ಮಂಗಳವಾರ ಮಾತನಾಡಲಿದ್ದಾರೆ. ರಕ್ಷಣಾ ಸಚಿವರ ಭಾಷಣಕ್ಕೆ ಮುಂಚಿತವಾಗಿ ಮೂರೂ ಸಶಸ್ತ್ರ ಪಡೆಗಳ ಮುಖ್ಯಸ್ಥರು(ಸಿಡಿಎಸ್)ಬಿಪಿನ್ ರಾವತ್ ಮತ್ತು ಭೂಸೇನೆ, ನೌಕಾಪಡೆ ಮತ್ತು ವಾಯುಸೇನೆಯ ಮುಖ್ಯಸ್ಥರು ಕಮಾಂಡರ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.