ನವದೆಹಲಿ:ಪರಿಸರ ಕಾರ್ಯಕರ್ತೆ ದಿಶಾ ರವಿ ಅವರು ಅಂಕಿತಾ ಜಾಕೋಬ್ ಮತ್ತು ಶಂತನು ಎಂಬುವವರ ಜೊತೆ ಸೇರಿ ಟೂಲ್ಕಿಟ್ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ ಎಂದು ದೆಹಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.
ಶನಿವಾರ ದಿಶಾ ರವಿ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ಟೆಲಿಗ್ರಾಮ್ ಅಪ್ಲಿಕೇಷನ್ ಮೂಲಕ ಟೂಲ್ಕಿಟ್ ಅನ್ನು ಸ್ವೀಡನ್ ಪರಿಸರ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ಗೆ ಕಳುಹಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾಧ್ಯಮಗೋಷ್ಠಿ ನಡೆಸಿದ ದೆಹಲಿ ಸೈಬರ್ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಪ್ರೇಮ್ನಾಥ್, ಟೂಲ್ ಕಿಟ್ ಅನ್ನು ಹಂಚಲು ದಿಶಾ ರವಿ ರಚಿಸಿದ್ದ ವಾಟ್ಸಪ್ ಗ್ರೂಪ್ ಅನ್ನು ಡಿಲೀಟ್ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:ಸಿದ್ದು, ಜಯಾ ಹಾದಿಯಲ್ಲೇ ಸಾಗಿದ ದೀದಿ: 'ಮಾ' ಯೋಜನೆಗೆ ಚಾಲನೆ
ಇದಕ್ಕೂ ಮೊದಲು ಟೂಲ್ಕಿಟ್ ಅನ್ನು ಹಂಚಿಕೊಂಡ ಆರೋಪದಲ್ಲಿ ನಿಕಿತಾ ಜಾಕೋಬ್ ಮತ್ತು ಶಂತನು ವಿರುದ್ಧ ಜಾಮೀನು ರಹಿತ ವಾರೆಂಟ್ ಅನ್ನು ದೆಹಲಿ ಪೊಲೀಸರು ಹೊರಡಿಸಿದ್ದರು.
ಶಂತನು ಮತ್ತು ನಿಕಿತಾ ಇಬ್ಬರೂ ಖಲಿಸ್ತಾನಿ ಬೆಂಬಲಿತ ಸಂಘಟನೆಯಾದ ಪೊಯೆಟಿಕ್ ಜಸ್ಟೀಸ್ ಫೌಂಡೇಷನ್ (ಪಿಜೆಎಫ್) ಝೂಮ್ ಅಪ್ಲಿಕೇಷನ್ನಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ್ದರೆಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದಿಶಾ, ಶಂತನು ಮತ್ತು ನಿಕಿತಾ ಟೂಲ್ಕಿಟ್ ಸೃಷ್ಟಿಸಿ, ಎಡಿಟ್ ಮಾಡಿದ್ದಾರೆ. ದಿಶಾ ಟೂಲ್ಕಿಟ್ ಅನ್ನು ಟೆಲಿಗ್ರಾಮ್ ಆ್ಯಪ್ ಮೂಲಕ ಗ್ರೆಟಾ ಥನ್ಬರ್ಗ್ಗೆ ಕಳುಹಿಸಿದ್ದಾರೆ. ಅವರನ್ನು ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.